ಕರ್ನಾಟಕ

karnataka

ETV Bharat / state

ಸೀತಾರಾಮ್ ಅಸಮಾಧಾನ ವಿಚಾರವನ್ನು ಪಕ್ಷದ ಶಿಸ್ತು ಸಮಿತಿ ನೋಡಿಕೊಳ್ಳಲಿದೆ: ಡಿಕೆಶಿ - congress protest against agnipath

ಪಕ್ಷದ ನಾಯಕರ ಮೇಲೆ ಅಸಮಾಧಾನಗೊಂಡು ಸಭೆ ನಡೆಸಿರುವವರ ವಿರುದ್ಧ ಪಕ್ಷದ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

dissatisfaction-of-the-leaders-will-be-look-after-by-congress-disciplinary-committee
ಸೀತಾರಾಮ್ ಅಸಮಾಧಾನ ವಿಚಾರ ಪಕ್ಷದ ಶಿಸ್ತು ಸಮಿತಿ ನೋಡಿಕೊಳ್ಳಲಿದೆ: ಡಿಕೆಶಿ

By

Published : Jun 25, 2022, 3:35 PM IST

ಬೆಂಗಳೂರು : ಪಕ್ಷದ ನಾಯಕರ ಮೇಲೆ ಅಸಮಾಧಾನಗೊಂಡು ಸಭೆ ನಡೆಸಿರುವ ಮಾಜಿ ಸಚಿವ ಎಂ ಆರ್ ಸೀತಾರಾಮ್ ವಿಚಾರವನ್ನು ಪಕ್ಷದ ಶಿಸ್ತು ಸಮಿತಿ ನೋಡಿಕೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಸೀತಾರಾಮ್ ಅವರು ಪಕ್ಷದ ಹಿರಿಯ ನಾಯಕರು. ಅವರು ಶಾಸಕರಾಗಿದ್ದು, ಸಚಿವರಾಗಿದ್ದರು. ಸದನದಲ್ಲಿ ಆಡಳಿತ ಪಕ್ಷದ ನಾಯಕರಾಗಿದ್ದರು. ಪಕ್ಷ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟಿತ್ತು. ಆದರೆ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಕಳೆದ ಬಾರಿಯ ವಿಧಾನ ಪರಿಷತ್ 2 ಸ್ಥಾನಗಳಿಗೆ ಹಿರಿಯರಾದ ನಾಸಿರ್ ಹಾಗೂ ಬಿ.ಕೆ ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿತ್ತು. ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ್ದೆವು. ಈ ಬಾರಿ ಜೈರಾಮ್ ರಮೇಶ್ ಅವರಿಗೆ ನೀಡಿದ್ದೇವೆ. ಇದರಲ್ಲಿ ಏನಾದರೂ ತಪ್ಪಿದ್ದರೆ ಹೇಳಲಿ ಎಂದರು.

ಪಕ್ಷದ ನಾಯಕರ ಮೇಲೆ ಅಸಮಾಧಾನಗೊಂಡು ಸಭೆ ನಡೆಸಿರುವವರ ವಿರುದ್ಧ ಪಕ್ಷದ ಶಿಸ್ತು ಸಮಿತಿ ಕ್ರಮಕೈಗೊಳ್ಳಲಿದೆ-ಡಿಕೆಶಿ

ಈ ವಿಚಾರವಾಗಿ ಪಕ್ಷದ ಶಿಸ್ತು ಸಮಿತಿ ನೋಡಿಕೊಳ್ಳುತ್ತದೆ. ನಮ್ಮ ಪಕ್ಷ ಅವರನ್ನು ಗುರುತಿಸಿ ಶಾಸಕ, ಸಚಿವ ಹಾಗೂ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟು ಒಳ್ಳೆಯದನ್ನು ಮಾಡಲಿ' ಎಂದು ಹೇಳಿದರು. ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದಾರೆ. ಬಿಜೆಪಿಯವರು ಯಾರನ್ನೂ ಬಿಡುವುದಿಲ್ಲ. ಬಿಜೆಪಿಯವರು ಯಾವ ರೀತಿ ಪ್ರಯತ್ನಿಸುತ್ತಿದ್ದಾರೆ, ಚಿಕ್ಕಬಳ್ಳಾಪುರದಿಂದ ಯಾರನ್ನು ಕಳುಹಿಸಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ಅವರದು ಬಹಳ ಗೌರವಯುತ ಕುಟುಂಬ ಅವರು ಈ ರೀತಿ ಮಾಡುವುದಿಲ್ಲ' ಎಂದು ಡಿಕೆಶಿ ಪ್ರತಿಕ್ರಿಯಿಸಿದರು.

ಅನ್ಯಾಯ ಖಂಡಿಸಿ ಪ್ರತಿಭಟನೆ : ಅಗ್ನಿಪಥ್ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಯುವಕರಿಗೆ ದೊಡ್ಡ ಅನ್ಯಾಯವಾಗುತ್ತಿದ್ದು, ಪ್ರತಿಭಟನೆ ಅನಿವಾರ್ಯ. ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸೇರಿಸಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ಏನಾದರೂ ಹೇಳಲಿ. ನಾವು ನಮ್ಮ ವಿಚಾರವನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಮಕ್ಕಳು ನಾಲ್ಕು ವರ್ಷ ಸೇನೆಯಲ್ಲಿ ಸೇವೆಯಲ್ಲಿ ಸಲ್ಲಿಸಿದ ನಂತರ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಲು ಬಿಡುವುದಿಲ್ಲ. ಬೇಕಿದ್ದರೆ ಬಿಜೆಪಿ ನಾಯಕರ ಮಕ್ಕಳನ್ನು ಆಗ್ನಿಪಥ್ ಮೂಲಕ ಸೇನೆಗೆ ಸೇರಿಸಲಿ. ಅವರ ಮಕ್ಕಳು ಮಾತ್ರ ವೈದ್ಯರು, ಇಂಜಿನಿಯರ್, ಪ್ರೊಫೆಸರ್ ಆಗಬೇಕು, ಬಡವರ ಮಕ್ಕಳು ಸೆಕ್ಯೂರಿಟಿ ಗಾರ್ಡ್ ಆಗಬೇಕಾ? ಎಂದು ಪ್ರಶ್ನಿಸಿದರು.

ಸೇನೆಗೆ ಯುವಕರನ್ನು ತೆಗೆದುಕೊಳ್ಳಲಿ. ಆದರೆ ಪೂರ್ಣಾವಧಿಗೆ ತೆಗೆದುಕೊಂಡು ಅವರು ನಿವೃತ್ತಿಯಾಗುವವರೆಗೂ ಸೇವೆಗೆ ಅವಕಾಶ ನೀಡಲಿ. ಇಷ್ಟು ದಿನ ಹೇಗಿತ್ತೋ ಹಾಗೆಯೇ ನೇಮಕ ಮಾಡಲಿ. ಯೋಧರ ವೇತನ ಹಾಗೂ ಪಿಂಚಣಿಗೆ ಸಮಸ್ಯೆ ಇದ್ದರೆ, ಸರ್ಕಾರ ಬೇರೆ ವಿಚಾರಗಳಿಗೆ ಸೆಸ್ ಹಾಕುತ್ತಿರುವಂತೆ ಮತ್ತೆ ಸೆಸ್ ಹಾಕಲಿ. ಅಗ್ನಿಪಥ್​ ಯೋಜನೆ ಖಂಡಿಸಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ಮಾಡಬೇಕು ಎಂದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಡಿಕೆಶಿ ಹೇಳಿದರು.

ಓದಿ :ವೃದ್ಧೆಗೆ ಆಪರೇಷನ್ ಮಾಡಿ ಬಳಿಕ ಹೊಲಿಗೆ ಹಾಕದೇ ಹಾಗೇ ಬಿಟ್ಟ ವೈದ್ಯ... ಮುಂದಾಗಿದ್ದೇನು?

ABOUT THE AUTHOR

...view details