ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಶಾಸಕರೆಲ್ಲರ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಆರಂಭಿಸಿರುವ ಜನಧ್ವನಿ ಜಾಥಾಗೆ ಆರಂಭದಲ್ಲೇ ಅಪಶಕುನ ಎದುರಾಗಿದೆ.
ಜನದನಿ ಕಾರ್ಯಕ್ರಮಕ್ಕೆ ಚಾಲನೆ ಸಿಗುವ ಎರಡು ದಿನ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೋಲಾರದ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದರು. ಆದಾಗ್ಯೂ ಕೆಲ ಅಡೆತಡೆಗಳು ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೋಚರಿಸಿದವು. ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿ ಮುಂಭಾಗ ಸ್ಥಳವನ್ನು ಕಾಮಗಾರಿಗಾಗಿ ಅಗೆಯಲಾಗಿದ್ದು, ತಾತ್ಕಾಲಿಕವಾಗಿ ಮರಳಿನಿಂದ ಮುಚ್ಚಲಾಗಿತ್ತು. ಬಸ್ ಹಿಂಭಾಗದ ಚಕ್ರ ಮರಳಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಸ್ ಅಲ್ಲಿಂದ ತೆರವುಗೊಳಿಸುವ ಪ್ರಯತ್ನ ನಡೆಸಲಾಯಿತು. ವಿಶೇಷ ಜಾಕ್ ತರಿಸಿ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಅನಿವಾರ್ಯವಾಗಿ ಈ ಬಸ್ ಅನ್ನು ಬಿಟ್ಟು ಬೇರೆ ವಾಹನದಲ್ಲಿ ಕಾಂಗ್ರೆಸ್ ನಾಯಕರು ತೆರಳಿದರು.
ಬಿದ್ದು ಪೆಟ್ಟು ಮಾಡಿಕೊಂಡ ಮಹಿಳೆ:ಇನ್ನೊಂದೆಡೆ ಕೆಪಿಸಿಸಿ ಕಚೇರಿಯಲ್ಲಿ ಉಂಟಾದ ನೂಕು ನುಗ್ಗಲಿನಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಬಿದ್ದು ಪೆಟ್ಟು ಮಾಡಿಕೊಂಡರು. ಕೆಪಿಸಿಸಿ ಕಚೇರಿ ನವೀಕರಣ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು, ಕೆಲವೆಡೆ ಕೆಲಸ ಅಪೂರ್ಣವಾಗಿದೆ. ಕೆಪಿಸಿಸಿ ಕಚೇರಿಯ ವರಾಂಡಾದಲ್ಲಿ ನಿಂತಿದ್ದ ಮಹಿಳೆ ಡಿಕೆ ಶಿವಕುಮಾರ್ ಆಗಮಿಸಿದ ಸಂದರ್ಭದಲ್ಲಿ ಉಂಟಾದ ನೂಕು ನುಗ್ಗಲಿನಿಂದಾಗಿ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರ ಬೆನ್ನಿಗೆ ಏಟಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಪಕ್ಷದ ಕಾರ್ಯಕ್ರಮ ಚಾಲನೆ ನೀಡುವ ಸಂದರ್ಭದಲ್ಲಿ ನಡೆದ ಕಾರಣ ಧಾರ್ಮಿಕ ನಂಬಿಕೆಯುಳ್ಳ ಪಕ್ಷದ ಕೆಲ ಮುಖಂಡರು ಇದನ್ನು ಅಪಶಕುನ ಎಂದು ತಮ್ಮಲ್ಲೇ ಮಾತನಾಡಿಕೊಂಡಿದ್ದಾರೆ.
ಎಲ್ಲ ಮುಗಿದ ನಂತರ ಕ್ಲೀನ್ಸರ್ ರಸ್ತೆಯ ಏಕಮುಖ ಸಂಚಾರ ದತ್ತ ಸಂಚರಿಸಿ ಜಾತಾ ಆರಂಭವಾದಾಗಲೂ ಕೆಲವರು ಅಚ್ಚರಿ ವ್ಯಕ್ತಪಡಿಸಿದರು. ಆದರೆ, ನಂತರ ತಿಳಿದು ಬಂದ ಸಂಗತಿ ಎಂದರೆ ಕೆಪಿಸಿಸಿ ಕಚೇರಿಯಿಂದ ಎಡಭಾಗಕ್ಕೆ ಹೊರಳಿದರೆ ಅದು ದೇವಮೂಲೆ ಎಂಬ ಕಾರಣಕ್ಕೆ ಪಕ್ಷದ ನಾಯಕರು ಹೆಜ್ಜೆ ಹಾಕುವ ಮೂಲಕ ಜಾಥಾಗೆ ಚಾಲನೆ ನೀಡಿದ್ದಾರೆ. ದೇವಮೂಲೆಯಲ್ಲಿ ತೆರಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವ ಕಾರ್ಯಕ್ಕೆ ಮುಂದಾದ ಕಾಂಗ್ರೆಸ್ ನಾಯಕರು, ರಸ್ತೆಯಲ್ಲಿ ಒಂದಿಷ್ಟು ದೂರ ಏಕಮುಖ ಮಾರ್ಗದಲ್ಲಿ ಸಂಚರಿಸಿ ದೇವನಹಳ್ಳಿಯತ್ತ ಪ್ರಯಾಣ ಬೆಳೆಸಿದ್ದಾರೆ.