ಬೆಂಗಳೂರು: ಕೊರೊನಾ ನೆಪವೊಡ್ಡಿ ಚಿಕ್ಕಬಳ್ಳಾಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ರೈತರು ಹೂವು ಮಾರಾಟ ಮಾಡಲು ಅನುಮತಿ ನೀಡದಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಚಿಕ್ಕಬಳ್ಳಾಪುರ ತಿರುಮಲ ಫ್ಲವರ್ ಸ್ಟಾಲ್ ಮಾಲೀಕ ಜಿ.ಎಂ ಶ್ರೀಧರ ಹಾಗೂ ಕರಿಗನಪಾಳ್ಯದ ರಮೇಶ್ ರೆಡ್ಡಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ವಾದ ಮಂಡಿಸಿ, ಕೊರೊನಾ ಸೋಂಕು ವ್ಯಾಪಿಸಿದ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವು ಮಾರಾಟಗಾರರಿಗೆ ನಿರ್ಬಂಧ ಹೇರಲಾಗಿತ್ತು.
ಇತ್ತೀಚೆಗೆ ಈ ನಿರ್ಬಂಧವನ್ನು ಸಡಿಲಿಸಿದ್ದರೂ ಸ್ಥಳೀಯ ಶಾಸಕ ಡಾ. ಕೆ. ಸುಧಾಕರ್ ಅವರ ರಾಜಕೀಯ ಒತ್ತಡದಿಂದಾಗಿ ಹೂವು ಮಾರಾಟಕ್ಕೆ ಅನುಮತಿ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.
ವಾದ ಆಲಿಸಿದ ಪೀಠ, ಈ ಕುರಿತು ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿತು. ಇದೇ ವೇಳೆ ಪ್ರಕರಣದ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ಎಪಿಎಂಸಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಚಿಕ್ಕಬಳ್ಳಾಪುರ ಎಪಿಎಂಸಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ನೋಟಿಸ್ ಜಾರಿಗೆ ಆದೇಶಿಸಿತು.
ಅರ್ಜಿದಾರರ ಆರೋಪ :ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗಾಗಲೇ ತರಕಾರಿ ಮತ್ತು ಆಲೂಗಡ್ಡೆ ಮಾರಾಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಹೂವು ಬೆಳೆಗಾರರಿಗೆ ಮಾತ್ರ ರಾಜಕೀಯ ಕಾರಣಗಳಿಗಾಗಿ ವ್ಯಾಪಾರ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ