ಬೆಂಗಳೂರು:ಸ್ವಾತಂತ್ರ್ಯ ನಂತರ ಈವರೆಗೂ ರಾಜ್ಯದಲ್ಲಿ 19 ರಾಜ್ಯಪಾಲರ ನೇಮಕವಾಗಿದೆ. ಇದರಲ್ಲಿ ಉತ್ತರಪ್ರದೇಶಕ್ಕೆ ಸೇರಿದ 7 ಜನ ರಾಜ್ಯಪಾಲರಾದರೆ, ಆಂಧ್ರಪ್ರದೇಶದ ಇಬ್ಬರಿಗೆ ಅವಕಾಶ ಸಿಕ್ಕಿದೆ. ಇನ್ನುಳಿದಂತೆ ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ಬಿಹಾರ, ಪಂಜಾಬ್, ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯದಿಂದ ತಲಾ ಒಬ್ಬೊಬ್ಬರು ರಾಜ್ಯಪಾಲರಾಗಿ ಅಧಿಕಾರ ನಡೆಸಿದ್ದಾರೆ.
ಮೈಸೂರು ರಾಜ್ಯ ರಚನೆಯಾದಾಗ ಮೊದಲ ರಾಜ್ಯಪಾಲರಾಗಿ ಅಂದಿನ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ನೇಮಕಗೊಂಡಿದ್ದು ಬಿಟ್ಟರೆ, ನಂತರ ಮತ್ತೆ ಯಾವ ಕನ್ನಡಿಗರಿಗೂ ಕರ್ನಾಟಕದ ರಾಜ್ಯಪಾಲರಾಗುವ ಅವಕಾಶ ಲಭಿಸಿಲ್ಲ.
ರಾಜಕೀಯ ತಾಣವಾಗಿ ರಾಜಭವನ ಆಗಬಾರದು ಎನ್ನುವ ಕಾರಣಕ್ಕೆ, ಅದೇ ರಾಜ್ಯಕ್ಕೆ ಸೇರಿದವರನ್ನು ಅದೇ ರಾಜ್ಯದ ರಾಜ್ಯಪಾಲರನ್ನಾಗಿ ನೇಮಿಸಬಾರದು ಎನ್ನುವ ಪರಿಪಾಠ ನಡೆಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಒಡೆಯರ್ ನಂತರ ರಾಜ್ಯದ ಮತ್ತೊಬ್ಬರಿಗೆ ನಮ್ಮ ರಾಜ್ಯದ ರಾಜ್ಯಪಾಲ ಹುದ್ದೆ ದಕ್ಕಲಿಲ್ಲ.
ಆದರೆ, ರಾಜ್ಯಪಾಲರ ನೇಮಕಾತಿಯಲ್ಲಿ ಕಾಂಗ್ರೆಸ್ ಆಳ್ವಿಕೆಯ ನೆಹರೂ ಕುಟುಂಬದ ಕಾಲದಿಂದ ಮನಮೋಹನ್ ಸಿಂಗ್ ವರೆಗೆ, 1999 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ವಾಜಪೇಯಿ ಸರ್ಕಾರ ಹಾಗೂ 2014 ಮತ್ತು 2019 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲೂ ಉತ್ತರ ಭಾರತಕ್ಕೆ ಮಣೆ ಹಾಕಲಾಗಿದೆ.ಈ ಮೂಲಕ ದಕ್ಷಿಣ ಭಾರತವನ್ನು ಕಡೆಗಣಿಸಿರುವುದು ಸ್ಪಷ್ಟವಾಗಿದೆ.
ಜಯಚಾಮರಾಜೇಂದ್ರ ಒಡೆಯರ್ ನಂತರ ದಕ್ಷಿಣ ಭಾರತದಿಂದ ರಾಜ್ಯಪಾಲರಾಗಿದ್ದು, 1987-90 ರವರೆಗೆ ತಮಿಳುನಾಡು ಮೂಲಕ ಪಿ. ವೆಂಕಟಸುಬ್ಬಯ್ಯ. ಅವರ ನಂತರ 1999-2002 ರವರೆಗೆ ಆಂಧ್ರಪ್ರದೇಶದ ಟಿ.ಎಸ್ ರಮಾದೇವಿ ರಾಜ್ಯಪಾಲರಾಗಿದ್ದರು. ಇದನ್ನು ಹೊರತುಪಡಿಸಿದರೆ 2014 ರಲ್ಲಿ ಕೆಲ ತಿಂಗಳ ಮಟ್ಟಿಗೆ ಆಂಧ್ರಪ್ರದೇಶದ ರೋಸಯ್ಯ ತಮಿಳುನಾಡಿನ ಜೊತೆ ಕರ್ನಾಟಕಕ್ಕೆ ಹೆಚ್ಚುವರಿಯಾಗಿ ನೇಮಕಗೊಂಡಿದ್ದರು. ಇನ್ನುಳಿದಂತೆ ಎಲ್ಲರೂ ಉತ್ತರ ಭಾರತದವರೇ ಆಗಿದ್ದಾರೆ.
ದಕ್ಷಿಣ ರಾಜ್ಯಗಳ ಕಡೆಗಣನೆಗೆ ಕಾರಣ :ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ರಾಷ್ಟ್ರೀಯ ಪಕ್ಷಗಳ ಹಿಡಿತದಲ್ಲೇ ಕೇಂದ್ರ ಸರ್ಕಾರ ಅಧಿಕಾರ ನಡೆಸಿದೆ. ನೆಹರೂ ಕುಟುಂಬದಲ್ಲಿ ಕಾಂಗ್ರೆಸ್ ಏಕಸ್ವಾಮ್ಯ ಅಧಿಕಾರ ಪಡೆದುಕೊಂಡಿದ್ದರೆ, ರಾಜೀವ್ ಗಾಂಧಿ ನಂತರ ಕಾಂಗ್ರೆಸ್ ಮಿತ್ರಪಕ್ಷಗಳನ್ನು ಅವಲಂಬಿಸಿ ಅಧಿಕಾರ ನಡೆಸುತ್ತಾ ಬಂದಿದೆ.
ಇನ್ನು 1999 ರಲ್ಲಿ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಅಧಿಕಾರಕ್ಕೇರಿದ್ದರೆ, 2014 ಮತ್ತ 2019 ರಲ್ಲಿ ಸತತ ಎರಡು ಅವಧಿಗೂ ಗೆಲುವು ಸಾಧಿಸಿದೆ. ಆದರೆ, ದಕ್ಷಿಣ ಭಾರತದ ರಾಜ್ಯಗಳು ಕಾಂಗ್ರೆಸ್ ಹಾಗು ಬಿಜೆಪಿ ಒಪ್ಪಿಲ್ಲ. ಆಂಧ್ರಪ್ರದೇಶದಲ್ಲಿ ಕೆಲ ವರ್ಷಗಳ ಕಾಲ ಕಾಂಗ್ರೆಸ್ಗೆ ನೆಲೆ ಸಿಕ್ಕಿತ್ತಾದರೂ ವೈ.ಎಸ್ ರಾಜಶೇಖರ ರೆಡ್ಡಿ ಅವರ ನಿಧನದ ನಂತರ ಅಲ್ಲಿ ಪಕ್ಷಕ್ಕೆ ನೆಲೆ ಇಲ್ಲವಾಗಿದೆ.
ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದ ಪೈಕಿ, ಕರ್ನಾಟಕದಲ್ಲಿ ಮಾತ್ರ ರಾಷ್ಟ್ರೀಯ ಪಕ್ಷಗಳ ಆಟ ನಡೆಯುತ್ತಿವೆ. ಇನ್ನುಳಿದಂತೆ ಕೇರಳದಲ್ಲಿ ಎಡಪಕ್ಷ ಇದ್ದರೆ, ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳು, ಆಂಧ್ರ, ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿವೆ. ಹಾಗಾಗಿ, ತಮ್ಮ ನೆಲೆ ಇಲ್ಲದ ರಾಜ್ಯಗಳಿಂದ ಕರ್ನಾಟಕಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡಲು ಕೇಂದ್ರದಲ್ಲಿ ಆಳ್ವಿಕೆ ಮಾಡಿರುವ ಯಾವುದೇ ಸರ್ಕಾರ ಮುಂದಾಗಿಲ್ಲ.
ಉತ್ತರ ಪ್ರದೇಶ ಅತಿಹೆಚ್ಚು ಲೋಕಸಭಾ ಕ್ಷೇತ್ರ ಹೊಂದಿದ ರಾಜ್ಯ. ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಬೇಕಾದರೂ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನ ಪಡೆಯಲೇಬೇಕು ಹಾಗಾಗಿ, ಆ ರಾಜ್ಯಕ್ಕೆ ನಮ್ಮ ರಾಜ್ಯದ ರಾಜ್ಯಪಾಲ ಹುದ್ದೆ ನೇಮಕದಲ್ಲಿ ಹೆಚ್ಚಿನ ಆದ್ಯತೆ ಸಿಕ್ಕಿದೆ. ನರೇಂದ್ರ ಮೋದಿ ಕಾರಣಕ್ಕೆ ಗುಜರಾತ್ ನ ವಜುಭಾಯ್ ವಾಲಾ ಅವಧಿ ಮುಗಿದರೂ 1.10 ವರ್ಷ ಹೆಚ್ಚುವರಿಯಾಗಿ ಅಧಿಕಾರದಲ್ಲಿ ಮುಂದುವರೆದಿದ್ದನ್ನು ಇಲ್ಲಿ ಸ್ಮರಿಸಬಹುದು.