ಬೆಂಗಳೂರು:ಅನರ್ಹ ಶಾಸಕರ ಸಂಬಂಧ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಲಿದ್ದ ಹಿನ್ನೆಲೆ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ರಾಜಕೀಯ ಭವಿಷ್ಯದ ಕುರಿತು ಸಿಎಂ ಜೊತೆ ಅನರ್ಹ ಶಾಸಕರು ಮಾತುಕತೆ ನಡೆಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದತ್ತ ಅನರ್ಹ ಶಾಸಕರು ಮಧ್ಯಾಹ್ನ ಸಿಎಂ ಗೃಹ ಕಚೇರಿ ಕೃಷ್ಣಾಗೆ ಅನರ್ಹ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಹಾಗೂ ಹೆಚ್ ವಿಶ್ವನಾಥ್ ಭೇಟಿ ನೀಡಿದರು. ಬೆಳಗ್ಗೆಯಷ್ಟೇ ಡಾಲರ್ಸ್ ಕಾಲೋನಿ ನಿವಾಸಕ್ಕೆ ಭೇಟಿ ನೀಡಿ ಸಿಎಂ ಜೊತೆ ಮಾತುಕತೆ ನಡೆಸಿದ್ದ ವಿಶ್ವನಾಥ್ ಮತ್ತೆ ಮಧ್ಯಾಹ್ನ ಗೃಹ ಕಚೇರಿಗೂ ಆಗಮಿಸಿ ಮಾತುಕತೆ ನಡೆಸಿದರು. ಉಭಯ ಅನರ್ಹ ಶಾಸಕರು ತಮ್ಮ ರಾಜಕೀಯ ಭವಿಷ್ಯ ಕುರಿತು ಸಮಾಲೋಚನೆ ನಡೆಸಿದರು.
ಅನರ್ಹರ ಜೊತೆ ಸಿಎಂ ಮಾತುಕತೆ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಸ್.ಆರ್.ವಿಶ್ವನಾಥ್, ಎಂ.ಪಿ ರೇಣುಕಾಚಾರ್ಯ, ಮಾಜಿ ಸಚಿವ ರಾಜುಗೌಡ, ಬಿ.ಜೆ ಪುಟ್ಟಸ್ವಾಮಿ ಕೂಡ ಆಗಮಿಸಿ ಸಿಎಂ ಭೇಟಿ ಮಾಡಿದರು. ಸುಪ್ರೀಂ ಕೋರ್ಟ್ ವಿಚಾರ ಸಂಬಂಧ ಸಮಾಲೋಚನೆ ನಡೆಸಿದರು.
ನಂತರ ಸಿಎಂ ಗೃಹ ಕಚೇರಿ ಕೃಷ್ಣಾಗೆ ನಟ ಜಗ್ಗೇಶ್ ಭೇಟಿ ನೀಡಿ ಯಶವಂತಪುರ ಟಿಕೆಟ್ ಸಂಬಂಧ ಮಾತುಕತೆ ನಡೆಸಿದ್ದಾರೆ. ಆದ್ರೆ ಸುಪ್ರೀಂ ತೀರ್ಪ ಹೊರ ಬಿದ್ದಿದ್ದು ಸದ್ಯಕ್ಕೆ ಉಪಚುನಾವಣೆಗೆ ಸುಪ್ರೀಂ ತಡೆಯಾಜ್ಞೆ ನೀಡಿದೆ. ಸಿಎಂ ಭೇಟಿ ಮಾಡಿ ನಿರ್ಗಮಿಸುವ ವೇಳೆ ಪ್ರತಿಕ್ರಿಯೆ ನೀಡಲು ಜಗ್ಗೇಶ್ ನಿರಾಕರಿಸಿದ್ದು, ಮಾಧ್ಯಮದವರು ಒತ್ತಾಯ ಮಾಡುತ್ತಿದ್ದಂತೆ ಸಿನಿಮಾಗಳಲ್ಲಿನ ಹಾಸ್ಯ ಸನ್ನಿವೇಶವನ್ನು ನೆನಪಿಸುವ ರೀತಿ ಕೈ ಮುಗಿದು ಓಡುವ ರೀತಿ ನಾಲ್ಕೆಜ್ಜೆ ಇಟ್ಟು ಕಾರು ಹತ್ತಿ ನಿರ್ಗಮಿಸಿದ್ದಾರೆ.
ಅನರ್ಹ ಶಾಸಕರ ಬಗ್ಗೆ ಮತ್ತೆ ವಿಚಾರಣೆ ನಡೆಸಲು ನಿರ್ಧರಿಸಿರುವ ಸುಪ್ರೀಂಕೋರ್ಟ್ 15 ಕ್ಷೇತ್ರಗಳ ಉಪಚುನಾವಣೆಗೆ ತಡೆಯಾಜ್ಞೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.