ಕರ್ನಾಟಕ

karnataka

ETV Bharat / state

ಅನರ್ಹ ಶಾಸಕರ ವಿಚಾರಣೆ: ’ಸುಪ್ರೀಂ ಜಡ್ಜ್​​​’  ಹಿಂದೆ ಸರಿದಿದ್ದರ ಹಿಂದೆ ಇನ್ನೂ ಒಂದು ರಹಸ್ಯವಿದೆ..! - ಅನರ್ಹ ಶಾಸಕರ ವಿಚಾರಣೆ

ಅನರ್ಹ ಶಾಸಕರ ವಿಚಾರಣೆಯಿಂದ ಸುಪ್ರೀಂ ನ್ಯಾಯಮೂರ್ತಿ ಹಿಂದೆ ಸರಿದಿದ್ದರ ರಹಸ್ಯವೇನು ಎಂಬುದರ ಬಗ್ಗೆ ಈ ಸ್ಟೋರಿ ಓದಿ...

ಕೃಪೆ : Twitter

By

Published : Sep 17, 2019, 2:11 PM IST

Updated : Sep 17, 2019, 2:46 PM IST

ಬೆಂಗಳೂರು : ಅನರ್ಹ ಶಾಸಕರ ವಿಚಾರಣೆಯಿಂದ ಸುಪ್ರೀಂ ನ್ಯಾಯಮೂರ್ತಿ ಹಿಂದೆ ಸರಿದಿರುವುದಕ್ಕೆ ಕರ್ನಾಟಕ ಮೂಲದವರು ಮಾತ್ರವಲ್ಲ ಇನ್ನೂ ಒಂದು ಆಸಕ್ತಿಕರ ರಹಸ್ಯವೂ ಇದೆ.

ಇಂದು ಸುಪ್ರೀಂಕೋರ್ಟ್​ನಲ್ಲಿ ರಾಜ್ಯದ 17 ಜನ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ನಿಗದಿಯಾಗಿತ್ತು. ನ್ಯಾಯಮೂರ್ತಿಗಳಾದ ಎನ್.ವಿ ರಮಣ, ಮೋಹನ್ ಶಾಂತನಗೌಡರ್ ಹಾಗೂ ಅಜಯ್ ರಸ್ತೋಗಿ ಅವರುಗಳಿದ್ದ ತ್ರಿಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು.

ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಮೂರ್ತಿ ಮೋಹನ ಶಾಂತನಗೌಡರು ತಾವು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದರು. ತಾವು ಕರ್ನಾಟಕ ರಾಜ್ಯದ ಮೂಲದವರಾಗಿದ್ದು, ತಮ್ಮ ಈ ಅರ್ಜಿ ವಿಚಾರಣೆಯಲ್ಲಿ ತಾವು ಭಾಗಿಯಾಗುವುದು ಸೂಕ್ತವಲ್ಲ ಎಂದು ಸ್ವಪ್ರೇರಣೆಯಿಂದ ಹಿಂದೆ ಸರಿದರು.

ನ್ಯಾಯಾಲಯದಲ್ಲಿ ಹಾಜರಿದ್ದ ಅನರ್ಹ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಕರ್ನಾಟಕ ರಾಜ್ಯದವರಾದರೂ ಈ ಅರ್ಜಿ ವಿಚಾರಣೆ ನಡೆಸಬಹುದೆಂದು ತಿಳಿಸಿದರು. ಇದಕ್ಕೆ ಆಕ್ಷೇಪ ಎತ್ತಬೇಕಾಗಿದ್ದ ಪ್ರತಿವಾದಿಗಳಾದ ಕಾಂಗ್ರೆಸ್ ಪಕ್ಷದ ಪರ ಹಾಜರಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಸಹ ‘ತಮ್ಮ ಅಭ್ಯಂತರ ಯಾವುದೂ ಇಲ್ಲ. ನೀವು ಕರ್ನಾಟಕ ರಾಜ್ಯದವರಾದರೂ ಈ ಅರ್ಜಿ ವಿಚಾರಣೆ ನಡೆಸಬಹುದು’ ಎಂದು ಹೇಳಿದರು.

ಎರಡೂ ಕಡೆಯ ನ್ಯಾಯವಾದಿಗಳು ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಅವರು ವಿಚಾರಣೆ ನಡೆಸಲು ಆಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದರೂ ನ್ಯಾಯಮೂರ್ತಿ ಶಾಂತನಗೌಡರು ತಮ್ಮ ನಿಲುವನ್ನು ಬದಲಿಸಲಿಲ್ಲ. ಕರ್ನಾಟಕದವರಾಗಿ ಈ ಅರ್ಜಿ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ತಿಳಿಸುವ ಮೂಲಕ ನ್ಯಾಯಾಂಗದ ಮೌಲ್ಯಗಳನ್ನು ಎತ್ತಿಹಿಡಿದರು.

ನ್ಯಾಯಮೂರ್ತಿ ಮೋಹನ್ ಶಾಂತನಗೌಡರು ವಾಸ್ತವವಾಗಿ ಕರ್ನಾಟಕದ ಮೂಲದವರು ಮಾತ್ರವಲ್ಲ. ಅರ್ಜಿದಾರರಲ್ಲಿ ಒಬ್ಬರಾದ ಅನರ್ಹ ಶಾಸಕ ಬಿ.ಸಿ ಪಾಟೀಲ್ ಅವರು ಪ್ರತಿನಿಧಿಸುವ ಹಿರೇಕೇರೂರು ಕ್ಷೇತ್ರದವರು. ಅಷ್ಟೇ ಅಲ್ಲ ಹಿರೇಕೆರೂರು ತಾಲೂಕಿನ ಚಿಕ್ಕೇರೂರಿನವರು.

ಇದರ ನಡುವೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಅವರು ಅನರ್ಹ ಶಾಸಕರಾದ ಬಿ.ಸಿ ಪಾಟೀಲ್ ಅವರ ಹತ್ತಿರದ ಸಂಬಂಧಿಕರೂ ಹೌದು. ಸಾಮಾನ್ಯವಾಗಿ ಪರಿಚಯದವರು ಅಥವಾ ಸಂಬಂಧಿಕರಿಗೆ ಸಂಬಂಧಪಟ್ಟ ಅರ್ಜಿ ವಿಚಾರಣೆಗೆ ಬಂದರೆ ಅದರಿಂದ ಹಿಂದೆ ಸರಿಯುವ ಸಂಪ್ರದಾಯ ನ್ಯಾಯಾಂಗದಲ್ಲಿ ಮೊದಲಿನಿಂದಲೂ ಜಾರಿಯಲ್ಲಿದೆ. ಅದೇ ಸಂಪ್ರದಾಯವನ್ನು ಮುಂದುವರಿಸಿ ನ್ಯಾಯಮೂರ್ತಿ ಶಾಂತನಗೌಡರು ಮೇಲ್ಪಂಕ್ತಿ ಹಾಕಿದ್ದಾರೆ.

Last Updated : Sep 17, 2019, 2:46 PM IST

ABOUT THE AUTHOR

...view details