ಬೆಂಗಳೂರು:ಕೆ.ಆರ್.ಪುರ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ರಂಗೇರುತ್ತಿದ್ದು, ಅನರ್ಹ ಶಾಸಕ ಬೈರತಿ ಬಸವರಾಜ್ ಪರೋಕ್ಷವಾಗಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.
ಅನರ್ಹ ಶಾಸಕ ಬಸವರಾಜ್ ಅವರು ಕೆ.ಆರ್.ಪುರಂನ ಐಟಿಐ ಬಸ್ ನಿಲ್ದಾಣದ ಬಳಿ ದೇವಸಂದ್ರ ವಾರ್ಡ್ ರಸ್ತೆ ಅಭಿವೃದ್ಧಿ ಕಾಮಗಾರಿ ಪೂಜೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಪ್ರತಿ ವರ್ಷ ಆಯುಧ ಪೂಜೆಗೆ ಕ್ಷೇತ್ರದ ಜನರಿಗೆ ಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಕಳೆದ ಎರಡ್ಮೂರು ವರ್ಷಗಳಿಂದ ಈ ಕಾರ್ಯ ಸ್ಥಗಿತವಾಗಿತ್ತು. ಆದರೆ ಈ ಬಾರಿ ಮತದಾರರನ್ನು ಸೆಳೆಯಲು ಶಾಸಕರು ಸಾರ್ವಜನಿಕವಾಗಿ ಜನರನ್ನು ಭೋಜನಕ್ಕೆ ಆಹ್ವಾನಿಸಿದರು.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾದ ಮಾಜಿ ನಗರಸಭಾ ಅಧ್ಯಕ್ಷ ಡಿ.ಕೆ. ಮೋಹನ್ ಬಾಬು ತಾನು ಬೈರತಿ ಬಸವರಾಜ್ರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದು, ತಾಕತ್ತಿದ್ದರೆ ಪಕ್ಷೇತರರಾಗಿ ನಿಲ್ಲಲಿ ಎಂದು ಸವಾಲೆಸಗಿದ್ದರು. ಇದಕ್ಕೆ ಬೈರತಿ ಬಸವರಾಜ್ ಅಭಿಮಾನಿಗಳು ಇಂದು ಆಕ್ರೋಶ ವ್ಯಕ್ತಪಡಿಸಿದರು.
ಅನರ್ಹ ಶಾಸಕರಿಗೆ ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದಿರುವ ಉಮೇಶ್ ಕತ್ತಿ ಅವರ ಹೇಳಿಕೆಗೆ ಬೈರತಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಇನ್ನು ಬಿಜೆಪಿ ಸೇರಿಲ್ಲ. ಸೇರೋಕೆ ಮುನ್ನ ಪ್ರತಿಕ್ರಿಯೆ ಮಾಡುವುದು ಸರಿಯಲ್ಲ. ಬಿಜೆಯವರ ಆಂತರಿಕ ವಿಚಾರವನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ. ಮತದಾರರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ ನಿಲ್ಲುತ್ತೇನೆ. ಪಕ್ಷದಿಂದ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾ ಎಂಬುದು ಮತದಾರರು ತೀರ್ಮಾನಿಸುತ್ತಾರೆ. ಕೆ.ಆರ್.ಪುರಕ್ಕೆ ನನ್ನನ್ನು ಯಾರೂ ಸಹ ಕರೆದುಕೊಂಡು ಬಂದಿಲ್ಲ. ನನ್ನದೇ ಶಕ್ತಿಯಿಂದ ಬಂದಿದ್ದೇನೆ. ನನ್ನ ವಿರುದ್ಧದ ಹೇಳಿಕೆಗೆ ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರಿಸುವೆ ಎಂದರು.