ಕರ್ನಾಟಕ

karnataka

ETV Bharat / state

ಅನರ್ಹ ಶಾಸಕರಿಗೆ 'ಸುಪ್ರೀಂ'ನಲ್ಲಿ ಸಿಗುವುದೇ ದೀಪಾವಳಿ ಸಿಹಿ.? - ರೆಬೆಲ್​ ಶಾಸಕರು

ಶಾಸಕರ ರಾಜೀನಾಮೆ, ಅನರ್ಹತೆ, ಪಕ್ಷಾಂತರ ನಿಷೇಧ ಕಾಯ್ದೆ, ಸ್ಪೀಕರ್ ಅಧಿಕಾರ, ಆಪರೇಶನ್ ಕಮಲ, ಅನರ್ಹ ಶಾಸಕರು ಉಪ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೂ ಸೇರಿದಂತೆ ಹಲವಾರು ಗೊಂದಲಗಳು ಈ ಪ್ರಕರಣದಲ್ಲಿ ಅಡಗಿರುವುದರಿಂದ ಸುದೀರ್ಘ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ.

mla case

By

Published : Oct 22, 2019, 3:30 AM IST

ಬೆಂಗಳೂರು: ಶಾಸಕ ಸ್ಥಾನ ರದ್ದುಪಡಿಸಿರುವ ರಾಜ್ಯ ವಿಧಾನ ಸಭೆಯ ಹಿಂದಿನ ಸ್ಪೀಕರ್ (ರಮೇಶ ಕುಮಾರ್) ಆದೇಶ ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಇಂದಿನಿಂದ ನಡೆಯಲಿದೆ.

ಶಾಸಕರ ರಾಜೀನಾಮೆ, ಅನರ್ಹತೆ, ಪಕ್ಷಾಂತರ ನಿಷೇಧ ಕಾಯ್ದೆ, ಸ್ಪೀಕರ್ ಅಧಿಕಾರ, ಆಪರೇಶನ್ ಕಮಲ, ಅನರ್ಹ ಶಾಸಕರು ಉಪ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೂ ಸೇರಿದಂತೆ ಹಲವಾರು ಗೊಂದಲಗಳು ಈ ಪ್ರಕರಣದಲ್ಲಿ ಅಡಗಿರುವುದರಿಂದ ಸುದೀರ್ಘ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ.

ರಾಜ್ಯದಲ್ಲಿ ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಉಪ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಡೆಸುತ್ತಿರುವ ವಿಚಾರಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಅನರ್ಹ ಶಾಸಕರ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳುವಂತೆ ಕೇಂದ್ರ ಚುನಾವಣೆ ಆಯೋಗ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದೆ. ಈ ನಡುವೆ ಕಾಂಗ್ರೆಸ್ ಪಕ್ಷದ ಪರ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಒಂದು ತಿಂಗಳು ಮುಂದೂಡುವಂತೆ ಕೋರ್ಟ್​ಗೆ ಮನವಿ ಮಾಡಿದ್ದಾರೆ. ಅನರ್ಹ ಶಾಸಕರು ಸಹ ತುರ್ತಾಗಿ ವಿಚಾರಣೆ ನಡೆಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಇಂದಿನಿಂದ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ಎನ್​ವಿ ರಮಣ ನೇತೃತ್ವದ ತ್ರಿಸದಸ್ಯ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ಮಾಡಲಿದೆ. ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಈಗಾಗಲೇ ದೆಹಲಿಗೆ ತೆರಳಿದ್ದಾರೆ.

ಅಯೋಧ್ಯೆ ಪ್ರಕರಣದ ವಿಚಾರಣೆಯಿಂದಾಗಿ ಸುಪ್ರೀಂಕೋರ್ಟ್ ಅನರ್ಹ ಶಾಸಕರ ಅರ್ಜಿಯ ತುರ್ತು ವಿಚಾರಣೆ ನಿರಾಕರಿಸಿತ್ತು. ಈಗ ಅಯೋಧ್ಯೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದರಿಂದ ಅನರ್ಹ ಶಾಸಕರ ಅರ್ಜಿಯನ್ನು ಆದ್ಯತೆ ಮೇರೆಗೆ ವಿಚಾರಣೆಗೆ ತಗೆದುಕೊಳ್ಳುವಂತೆ ಅನರ್ಹ ಶಾಸಕರು ಕೋರ್ಟನ್ನು ಕೋರಿದ್ದಾರೆ.

ಶಾಸಕತ್ವ ರದ್ದುಪಡಿಸಿರುವ ಸ್ಪೀಕರ್ ಆದೇಶ ರದ್ದುಪಡಿಸಬೇಕು ಹಾಗೂ ಉಪಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಅವಕಾಶ ನೀಡಬೇಕೆನ್ನುವುದು ಅನರ್ಹ ಶಾಸಕರ ಪ್ರಮುಖ ಮನವಿಯಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿ ಬಹುಮತದ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ತೀರ್ಪನ್ನು ಎತ್ತಿಹಿಡಿಯಬೇಕೆನ್ನುವುದು ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಸ್ಪೀಕರ್ ಅವರ ಮನವಿಯಾಗಿದೆ.

ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿರುವ ಅರ್ಜಿ ವಿಚಾರಣೆ ಮೇಲಿನ ತೀರ್ಪು ಅನರ್ಹ ಶಾಸಕರ ರಾಜಕೀಯ ಭವಿಷ್ಯ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯ ಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಭವಿಷ್ಯವನ್ನು ನಿರ್ಧರಿಸಲಿದೆ.

ABOUT THE AUTHOR

...view details