ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ ಹಾgಊ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಈ ಪ್ರವಾಹಕ್ಕೆ 5 ಜನ ಸಾವನ್ನಪ್ಪಿದ್ದು, ಅಪಾಯದ ಸ್ಥಳಗಳಲ್ಲಿದ್ದ 28 ಸಾವಿರ ಜನರನ್ನು ಮುಂಜಾಗೃತ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಮಳೆಗೆ ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಹಾಗು ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪ್ರವಾಹದಿಂದ ಅಪಾಯದ ಸ್ಥಿತಿಗೆ ಸಿಲುಕಲಿದ್ದ ಒಟ್ಟು 28 ಸಾವಿರ ಜನರನ್ನು ರಾಜ್ಯ ಸರ್ಕಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 22,682 ಜನರನ್ನು ಸ್ಥಳಾಂತರಿಸಿದೆ. ಬಾಗಲಕೋಟೆ 2872, ಉತ್ತರ ಕನ್ನಡ ಜಿಲ್ಲೆಯಲ್ಲಿ 3019 ಜನರನ್ನು ಸುರಕ್ಷಿತ ಜಾಗಕ್ಕೆ ಬಿಡಲಾಗಿದೆ.
ಪ್ರವಾಹದಿಂದ ಉಂಟಾದ ಹಾನಿ:ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಸೇರಿ 32 ತಾಲೂಕುಗಳು, 227 ಗ್ರಾಮಗಳು ಪ್ರವಾಹದಿಂದ ಬಾಧಿತಗೊಂಡಿವೆ. ರಾಜ್ಯದಲ್ಲಿ 150 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಸುಮಾರು 10 ಸಾವಿರ ಜನಕ್ಕೆ ಆಹಾರ ಸೌಲಭ್ಯ ಒದಗಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 9519 ಜಾನುವಾರಗಳನ್ನು ರಕ್ಷಿಸಲಾಗಿದೆ. ಉತ್ತರ ಕರ್ನಾಟಕದಲ್ಲಿಯೇ ಸುಮಾರು 80,590 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ ಎನ್ನಲಾಗುತ್ತಿದೆ.