ಬೆಂಗಳೂರು:ಡಿ.ಜೆ.ಹಳ್ಳಿ ಪ್ರಕರಣದ ಅಮಾಯಕರಿಗೆ ಅನ್ಯಾಯವಾಗಿದೆ. ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಶಿವಾಜಿ ನಗರದಲ್ಲಿ ಮಾತನಾಡಿದ ಅವರು, ಕೆ ಜಿ ಹಳ್ಳಿ, ಡಿಜೆ ಹಳ್ಳಿ ಬಂಧಿತರ ಬಿಡುಗಡೆ ವಿಚಾರವಾಗಿ ಕುಟುಂಬಸ್ಥರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಏನೇ ಮಾಡಿದರೂ ಕಾನೂನು ವ್ಯಾಪ್ತಿ ಮಾಡಬೇಕು. ಈ ಬಗ್ಗೆ ಹೆಚ್ಚು ಮಾತನಾಡಲು ಆಗುವುದಿಲ್ಲ. ಬಿಜೆಪಿ ಸರ್ಕಾರ ಕೆಲವು ಸೆಕ್ಷನ್ಗಳನ್ನು ಪ್ರಯೋಗ ಮಾಡಿರುವುದರಿಂದ ಅವರು ಹೊರಬರಲು ಆಗುತ್ತಿಲ್ಲ.
ಕಾನೂನಿನ ಅಡಿಯಲ್ಲಿ ನ್ಯಾಯ ಒದಗಿಸಿಕೊಡಬೇಕು. ಈ ಬಗ್ಗೆ ಶಾಸಕರು ನಮ್ಮ ಬಳಿ ಚರ್ಚೆ ಮಾಡಿದ್ದು ಕಾನೂನು ತಂಡದ ಜತೆ ಮಾತನಾಡಿ ತೀರ್ಮಾನ ಮಾಡುತ್ತೇವೆ. ಕಾನೂನು ಕೈಗೆತ್ತಿಕೊಂಡವರ ವಿರುದ್ಧದ ಕ್ರಮಕ್ಕೆ ನಮ್ಮ ಅಭ್ಯಂತರವಿಲ್ಲ. ಕೆಲವು ಅಮಾಯಕರು ಇದರಲ್ಲಿ ಸಿಲುಕಿದ್ದಾರೆ ಎಂಬ ಕೂಗು ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಡಿಸಿಎಂ ವಿಚಾರದಲ್ಲಿ ಹೈಕಮಾಂಡ್ ಉತ್ತರ ನೀಡಲಿದೆ:ಸರ್ಕಾರದಲ್ಲಿ ಮೂವರು ಡಿಸಿಎಂ ಮಾಡಬೇಕು ಎಂಬ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ ಕೇಳಿದಾಗ, ಹೆಚ್ಚುವರಿ ಡಿಸಿಎಂ ವಿಚಾರಕ್ಕೆ ಹೈಕಮಾಂಡ್ ನಾಯಕರು ಉತ್ತರ ನೀಡುತ್ತಾರೆ. ನಾನು ಆ ಬಗ್ಗೆ ಉತ್ತರ ನೀಡುವುದಿಲ್ಲ. ಸಂಸತ್ ಚುನಾವಣೆಯನ್ನು ಗೆಲ್ಲಬೇಕು. ಅದಕ್ಕಾಗಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಡಿಕೆಶಿ ತಿಳಿಸಿದರು.
ಕನ್ನಡದ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇದೆ: ಸಚಿವ ಸಂಪುಟ ಸಭೆಯಲ್ಲಿ ಕನ್ನಡ ನಾಮಫಲಕ ವಿಚಾರವಾಗಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಇದು ಕರ್ನಾಟಕ ಸರ್ಕಾರಕ್ಕೆ ಕನ್ನಡ ಭಾಷೆ ಬಗ್ಗೆ ಇರುವ ಬದ್ಧತೆ, ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇರಬೇಕು. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಮಾಡುತ್ತಿದ್ದು, ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಉಳಿದಂತೆ ಅವರು ಯಾವುದೇ ಭಾಷೆಯಲ್ಲಿ ಹಾಕಿಕೊಳ್ಳಲಿ. ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಬೇಕು. ವ್ಯಾಪಾರ ಮಾಡುವವರು ಕನ್ನಡ ತಾಯಿ ಹಾಗೂ ಭೂಮಿಗೆ ಗೌರವ ನೀಡಬೇಕು ಎಂದರು.