ಬೆಂಗಳೂರು : ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗಲೇಬೇಕು. ಷಡ್ಯಂತ್ರ ಮಾಡಿದವರು, ನೆರವು ಕೊಟ್ಟವರಿಗೂ ಶಿಕ್ಷೆಯಾಗಬೇಕು ಎಂದು ಗೃಹ ಸಚಿವ ಬೊಮ್ಮಾಯಿ ಸಿಡಿ ಮೇಲಿನ ಚರ್ಚೆಗೆ ಉತ್ತರ ನೀಡುತ್ತಾ ಹೇಳಿದರು.
ಯಾರೇ ದೊಡ್ಡವರಿದ್ರೂ, ಎಷ್ಟೇ ಪ್ರಭಾವಿ ಇದ್ರೂ, ತಪ್ಪು ಮಾಡಿದ್ರೆ ಶಿಕ್ಷೆ ಆಗಲೇಬೇಕು, ಸತ್ಯ ಹೊರಗೆ ಬರಬೇಕು. ಎಸ್ಐಟಿ ಸರಿಯಾಗಿ ತನಿಖೆ ಮಾಡ್ತಿದೆ. ರಮೇಶ್ ಜಾರಕಿಹೊಳಿಯವ್ರನ್ನೂ ವಿಚಾರಣೆ ಮಾಡ್ತಿದೆ. ಮೂರು ಎಫ್ಐಆರ್ಗಳು ದಾಖಲಾಗಿವೆ. ಎಲ್ಲವನ್ನೂ ಎಸ್ಐಟಿಗೆ ಕೊಟ್ಟಿದೇವೆ ಎಂದರು.
ಸಿಡಿ ಪ್ರಕರಣ ಸಂಬಂಧ ಬಹಳ ಸುದೀರ್ಘವಾಗಿ ಪ್ರತಿಪಕ್ಷ ನಾಯಕರು ಮಾತನಾಡಿದ್ದಾರೆ. ಕಾನೂನಿನ ಬಗ್ಗೆಯೂ ಮಾತನಾಡಿದ್ದಾರೆ. ಇಲ್ಲಿ ಚರ್ಚಿಸುತ್ತಿರುವುದು ನೈತಿಕ ವಿಚಾರ, ಕ್ರಿಮಿನಲ್ ವಿಚಾರ. ನೈತಿಕತೆ ಬಗ್ಗೆ ನಮ್ಮ ಮನಸಾಕ್ಷಿಗೆ ತಕ್ಕಂತೆ ಮಾತನಾಡಬೇಕು. ರಮೇಶ್ ಜಾರಕಿಹೊಳಿಯೂ ನೈತಿಕತೆ ಮುಂದಿಟ್ಟೇ ರಾಜೀನಾಮೆ ಕೊಟ್ಟಿದಾರೆ ಎಂದರು.
ಸಿಡಿ ವಿಚಾರದ ಬಗ್ಗೆ ಹಲವರು ದೂರು ಕೊಟ್ಟಿದಾರೆ. ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟರೂ, ದಿನೇಶ್ ದೂರು ಪರಿಶೀಲನೆಗೂ ಮುನ್ನವೇ ಸಿಡಿ ಟಿವಿಗಳಲ್ಲಿ ಬಂತು. ಅಂದರೆ ಸಿಡಿ ರಿಲೀಸ್ ಆಗಲು ಎಲ್ಲಾ ತಯಾರಿ ನಡೆದಿತ್ತು. ದಿನೇಶ್ ದೂರಿನ ವೇಳೆ ಸಂತ್ರಸ್ತೆ ಇರಲಿಲ್ಲ, ಸಂಬಂಧಿಕರಿರಲಿಲ್ಲ.
ವಿಧಾನಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದರು ದಿನೇಶ್ಗೆ ಕೇಳಿದ್ರೆ ಅವರ ಸಂಬಂಧಿಕರು ಕೊಟ್ರು ಅಂದ್ರು. ಅವರಿಗೆ ಆ ಸಂಬಂಧಿಕರ ಹೆಸರು ಗೊತ್ತಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದವರು ಯಾರೂ ದೂರು ಕೊಟ್ಟಿರಲಿಲ್ಲ. ಈ ಮಧ್ಯೆ ದಿನೇಶ್ ದೂರು ವಾಪಸ್ ಪಡೀತಿನಿ ಅಂದರು. ನಾವು ಮೊದಲು ಒಪ್ಪಿ ಕೊಳ್ಳಲಿಲ್ಲ, ಮಾರನೇ ದಿನ ದಿನೇಶ್ ಖುದ್ದು ಬಂದು ದೂರು ವಾಪಸ್ ಪಡೆದರು ಎಂದು ತಿಳಿಸಿದರು.
ಓದಿ : ಕೋರ್ಟ್ ಮೊರೆ ಹೋಗಲು ನಿಮಗೆ ಸಲಹೆ ಕೊಟ್ಟವರು ಅವಿವೇಕಿಗಳು : ರಮೇಶ್ ಕುಮಾರ್
ಇನ್ನೊಂದು ಕಡೆ ರಮೇಶ್ ಜಾರಕಿಹೊಳಿ ನನಗೆ ಪತ್ರ ಬರೆದರು. ದಿನೇಶ್ ದೂರು ಸೇರಿದಂತೆ ತನಿಖೆ ಮಾಡಲು ಪೊಲೀಸ್ ಆಯುಕ್ತರಿಗೆ ಸೂಚಿಸಿದೆವು. ಎಸ್ಐಟಿ ರಚನೆಯಾಯ್ತು. ಎಸ್ಐಟಿಯಲ್ಲಿ ದಿನೇಶ್ ದೂರು, ರಮೇಶ್ ಜಾರಕಿಹೊಳಿ ದೂರು ಬಗ್ಗೆ ತನಿಖೆ ನಡೆಯುತ್ತಿದೆ. ಎಸ್ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ.
ಇದಾದ ಬಳಿಕ ಆ ಹೆಣ್ಣುಮಗಳ ವಿಡಿಯೋ ಬಂತು. ವಿಡಿಯೋದಲ್ಲಿರುವ ಹೆಣ್ಣು ಮಗಳಿಗೆ ರಕ್ಷಣೆ ಕೊಡಲು ಸೂಚಿಸಲಾಯ್ತು. ನಂತರ ಆಕೆಗೆ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟಿದ್ದೇವೆ. ಎಲ್ಲಿದ್ದೀರೋ ಅಲ್ಲೇ ಬಂದು ಹೇಳಿಕೆ ತೆಗೆದುಕೊಳ್ಳುತ್ತೇವೆ ಎಂದು ನೋಟಿಸ್ನಲ್ಲಿ ತಿಳಿಸಿದ್ದೇವೆ ಎಂದರು.
ಒಂದು ಅಪರಾಧ ಆದರೆ ಬರಹದಲ್ಲಿ ಅಥವಾ ಮೌಖಿಕ ದೂರು ಕೊಡಬೇಕು. ಆದರೆ, ಆ ಹೆಣ್ಣು ಮಗಳು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರ ಆಧಾರದಲ್ಲೂ ತನಿಖೆ ನಡೆಯುತ್ತಿದೆ. ಯುವತಿ ಹೇಳಿಕೆಯು ಪರಿಶೀಲನೆ ಮಾಡುತ್ತಿದ್ದೇವೆ. ಆ ವಿಡಿಯೋ ಎಲ್ಲಿಂದ ಬಂತು ಅಂತಲೂ ತನಿಖೆ ನಡೆಯುತ್ತಿದೆ.
ಯುವತಿ ಹೇಳಿಕೆಯಲ್ಲಿ ಆತ್ಮಹತ್ಯೆ ಯತ್ನ ಮಾಡಿದ್ದೀನಿ ಅಂದಿದ್ದಾಳೆ. ಯುವತಿ ಪೋಷಕರು ನಾವು ಆತ್ಮಹತ್ಯೆ ಯತ್ನ ಮಾಡಿದ್ದೇವೆ ಎಂದು ದೂರಲ್ಲಿ ಹೇಳಿಲ್ಲ. ಯುವತಿ ಹೇಳುತ್ತಾಳೆ ರಮೇಶ್ ಜಾರಕಿಹೊಳಿಯೇ ವಿಡಿಯೋ ಬಿಟ್ಟಿದಾರೆ ಎಂದು, ರಮೇಶ್ ಜಾರಕಿಹೊಳಿಯವರು ತಮ್ಮ ಸಚಿವ ಸ್ಥಾನ ಬಲಿ ಕೊಡಲು ವಿಡಿಯೋ ಬಿಡ್ತಾರಾ? ಎಂದು ಪ್ರಶ್ನಿಸಿದರು.
22 ಅಧಿಕಾರಿಗಳು ಎಸ್ಐಟಿಯಲ್ಲಿದಾರೆ, 11 ಜನರ ಹೇಳಿಕೆ ಪಡೆದಿದ್ದೇವೆ. ಯುವತಿಯನ್ನು ಹುಡುಕಿ ತರುವುದು ಶತಃಸಿದ್ದ. ಆಕೆಯನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತೇವೆ. ಆಕೆ ಒಂದ್ ಕಡೆ ಇಲ್ಲ, ಓಡಾಡ್ತಿದ್ದಾಳೆ. ಐದು ತಂಡದಲ್ಲಿ ಆಕೆಯ ಹುಡುಕಾಟ ನಡೆಯುತ್ತಿದೆ. ಗೋವಾ, ಭೋಪಾಲ್, ದೆಹಲಿ, ಬೆಳಗಾವಿ ಅಂತೆಲ್ಲ ಆಕೆ ಓಡಾಡ್ತಿದಾಳೆ ಎಂದರು.
ಉತ್ತರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ :ಇತ್ತ ಸಚಿವ ಬೊಮ್ಮಾಯಿ ಉತ್ತರದಿಂದ ಸಮಾಧಾನಗೊಳ್ಳದ ಕಾಂಗ್ರೆಸ್ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟಿಸಿದರು. ರಮೇಶ್ ಜಾರಕಿಹೊಳಿ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಆಕೆ ಹೇಳಿಕೆ ಮೇಲೆ ಜಾರಕಿಹೊಳಿ ವಿರುದ್ದ 376ಅಡಿ ಪ್ರಕರಣ ದಾಖಲಾಗಬೇಕು.
ಎಸ್ಐಟಿ ತನಿಖೆಯ ಮೇಲೆ ಭರವಸೆ ಇಲ್ಲ. ಸರ್ಕಾರದ ಉತ್ತರವನ್ನು ನಾವು ಖಂಡಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಬಳಿಕ ಸ್ಪೀಕರ್ ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.