ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಸಿಕ ರೂ.5 ಸಾವಿರ, ಉಪಾಧ್ಯಕ್ಷರಿಗೆ ರೂ.4 ಸಾವಿರ ಮತ್ತು ಸದಸ್ಯರಿಗೆ ರೂ. 3 ಸಾವಿರಗಳನ್ನು ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಪರವಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನಪರಿಷತ್‍ನಲ್ಲಿ ತಿಳಿಸಿದ್ದಾರೆ.
ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ವಿಧಾನಪರಿಷತ್‍ನಲ್ಲಿ ವಿಷಯ ಪ್ರಸ್ತಾಪಿಸಿ, ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುತ್ತಿದ್ದ ಗೌರವಧನ ತುಂಬಾ ಕಡಿಮೆ ಇರುತ್ತದೆ. ಗೌರವಧನ ಪರಿಷ್ಕರಿಸಿ 5 ವರ್ಷಗಳು ಕಳೆದಿವೆ. ಆದ್ದರಿಂದ ನೀಡುತ್ತಿರುವ ಗೌರವಧನ ಸದ್ಯ ಬೆಲೆ ಏರಿಕೆಯಿಂದಾಗಿ ಏತಕ್ಕೂ ಸಾಲದಾಗಿದೆ. ಕಾರಣ ಕೂಡಲೇ ಸರ್ಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ರೂ.5 ಸಾವಿರ, ಉಪಾಧ್ಯಕ್ಷರಿಗೆ ರೂ.4 ಸಾವಿರ ಮತ್ತು ಸದಸ್ಯರಿಗೆ ರೂ.3 ಸಾವಿರ ಗೌರವಧನವನ್ನು ಹೆಚ್ಚಿಸಲು ಕೇಳಿದರು.
ಈ ಕುರಿತು ವಿಧಾನಪರಿಷತ್‍ನಲ್ಲಿ ಇಂದು ಚರ್ಚೆ ನಡೆದಾಗ ಉಳಿದ ಸದಸ್ಯರು ಕೂಡ ಸುನೀಲಗೌಡ ಪಾಟೀಲರು ಕೇಳಿದ ಪ್ರಶ್ನೆಯನ್ನು ಪ್ರಶಂಸಿಸಿ, ಇಡೀ ರಾಜ್ಯದ ಗ್ರಾಮ ಪಂಚಾಯಿತಿ ಸದಸ್ಯರ ಪರವಾಗಿ ಯುವ ಸದಸ್ಯ ಸುನೀಲಗೌಡ ಪಾಟೀಲರು ಈ ಪ್ರಶ್ನೆ ಕೇಳಿದ್ದು, ನಾವೆಲ್ಲ ಇವರನ್ನು ಬೆಂಬಲಿಸುತ್ತೇವೆ. ಪಂಚಾಯಿತಿ ಸದಸ್ಯರಿಗೆ ಗೌರವಧನ ಹೆಚ್ಚಿಸುವುದು ಅತ್ಯವಶ್ಯಕವಾಗಿದೆ ಎಂದರು.