ಬೆಂಗಳೂರು: ಔಷಧಿ ಖರೀದಿ ವಿಚಾರದಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಸಮಗ್ರ ತನಿಖೆ ನಡೆಸುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಹಾಗೂ ಪ್ರತಿಪಕ್ಷ ಉಪನಾಯಕ ಡಾ. ಕೆ.ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆ ಆಯುಕ್ತರ ಮಟ್ಟದಲ್ಲಿ ರಾಜ್ಯಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಇ-ಟೆಂಡರ್ ಮೂಲಕ ಔಷಧಿ ಖರೀದಿ ಮಾಡಲಾಗುತ್ತಿದೆ.
ತಾಂತ್ರಿಕ ಸಮಿತಿ ಶಿಫಾರಸಿನ ಮೇರೆಗೆ ಅಗತ್ಯ ಇರುವ ಔಷಧಿಗಳನ್ನು ಖರೀದಿಸಲಾಗುತ್ತಿದೆ. ಎಲ್ 1 ಇರುವವರಿಗೆ ಟೆಂಡರ್ ನೀಡುತ್ತಿದ್ದೇವೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಆದಾಗ್ಯೂ, ಇಂತಹ ಪ್ರಕರಣ ಬೆಳಕಿಗೆ ಬಂದಿಲ್ಲ. ಇಲಾಖೆಯಲ್ಲಿ ಇಂತಹ ಅಕ್ರಮ ನಡೆದಿಲ್ಲ ಎಂದರು. ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ಕಳಪೆ ಔಷಧಿಯಿಂದಾಗಿ ಜಾನುವಾರು ಸಾಯುತ್ತಿವೆ.
ಇದರಿಂದ ರೈತರಿಗೆ ನಷ್ಟ ಆಗುತ್ತಿದೆ. ಔಷಧಿ ಖರೀರಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಇದನ್ನು ಸದನ ಸಮಿತಿ, ಎಸ್‌ಐಟಿ, ಸಿಐಡಿ ಅಥವಾ ಎಸಿಬಿ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು. ಸಭಾಪತಿ ಅವರು ಮಧ್ಯಪ್ರವೇಶಿ ಮಾಡಿ ತನಿಖೆ ಮಾಡಿಸಿ ಎಂದಾಗ ಸಚಿವರು ಅದಕ್ಕೆ ಸಹಮತ ವ್ಯಕ್ತ ಪಡಿಸಿದರು.