ಬೆಂಗಳೂರು : ಹುಳಿಮಾವು ಗ್ರಾಮದಲ್ಲಿ ಅತಿಕ್ರಮಣಗೊಂಡಿರುವ 5 ಎಕರೆ ಜಾಗ ಸರ್ಕಾರಕ್ಕೆ ಸೇರಿದ್ದಾಗಿದೆ. ಅದು ಸರ್ಕಾರಿ ಜಾಗ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಸದ್ಯ ಸುಪ್ರೀಂಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದ್ದು, ಅಲ್ಲಿ ಸರ್ಕಾರ ಅಫಿಡವಿಟ್ ಸಲ್ಲಿಸಿ ನಂತರ ಭೂಮಿ ವಶಪಡಿಸಿಕೊಳ್ಳುವ ಕುರಿತು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನಪರಿಷತ್ ಕಲಾಪದಲ್ಲಿ ನಿಯಮ 330 ರ ಅಡಿ ವಿಷಯ ಪ್ರಸ್ತಾಪ ಮಾಡಿದ ಬಿಜೆಪಿ ಸದಸ್ಯ ರವಿಕುಮಾರ್, ಬೆಂಗಳೂರು ನಗರ ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದ ಸರ್ವೆ ನಂಬರ್ 63 ರಲ್ಲಿ ಐದು ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಇಸ್ಲಾಮಿಯಾ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದೆ. ಸರ್ಕಾರಿ ಜಾಗ ಎಂದು ಬೋರ್ಡ್ ಹಾಕಿದ್ದರೂ, ಸಂಸ್ಥೆ ಆರಂಭಕ್ಕೆ ಅವಕಾಶ ಹೇಗೆ ನೀಡಲಾಗಿದೆ? ಸಂಸ್ಥೆ ಸ್ಥಾಪನೆಗೆ ಯಾರು ಅವಕಾಶ ನೀಡಿದರು? ಇದು ಸರ್ಕಾರದ ಜಾಗ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ. ಆದರೂ ಇದಕ್ಕೆ ಶಿಕ್ಷಣ ಇಲಾಖೆ ಹೇಗೆ ಅನುಮತಿ ಕೊಟ್ಟಿತು? ಯಾರು ಆ ಅಧಿಕಾರಿ? ಒತ್ತುವರಿ ಜಾಗ ವಶಕ್ಕೆ ಹೈಕೋರ್ಟ್ ಆದೇಶವಿದೆ. ಆದರೂ ಒತ್ತುವರಿ ಯಾಕೆ ತೆರವು ಮಾಡಿಲ್ಲ, ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಆದರೂ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರದ ಗಮನ ಸೆಳೆದರು.
ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಹೈಕೋರ್ಟ್ ಆದೇಶ ಜಾರಿಯಲ್ಲಿರಲಿದೆ. ಹಾಗಾಗಿ ಒತ್ತುವರಿ ತೆರವು ಮಾಡಬೇಕಿತ್ತು, ಸರ್ಕಾರಿ ಭೂಮಿ ಎಂದು ನಾಮಫಲಕ ಇದ್ದರೂ, ಒತ್ತುವರಿ ಮಾಡಿದ್ದು ಯಾಕೆ? ಸರ್ಕಾರ ಕೂಡಲೇ ಒತ್ತವರಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.