ಬೆಂಗಳೂರು: ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಇನ್ನು ಮುಂದೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡುವ ರೈತರಿಗೆ ಪರಿಹಾರ ನೀಡಲು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದ್ದಾರೆ. ಇಂದು ಪ್ರಶ್ನೋತ್ತರ ಅವಧಿ ವೇಳೆ ಕಾಂಗ್ರೆಸ್ ಸದಸ್ಯ ಎನ್.ಎ.ಹ್ಯಾರಿಸ್ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಾಯ್ದೆಗಳು ಪ್ರತ್ಯೇಕವಾಗಿದ್ದವು. ಇತ್ತೀಚೆಗೆ ಹಾಲಿ ಇದ್ದ ಕೆಐಎಡಿಬಿ ಕಾಯ್ದೆಗೆ ಉಭಯ ಸದನಗಳಲ್ಲಿ ತಿದ್ದುಪಡಿ ಮಾಡಿದ್ದರಿಂದ ರೈತರಿಗೆ ತೊಂದರೆಯಾಗದಂತೆ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.
ಹೊಸ ಭೂ ಸ್ವಾಧೀನ ಕಾಯ್ದೆ 2013ಕ್ಕೆ ತಿದ್ದುಪಡಿ ತರುವ ಮೂಲಕ ಪರಿಹಾರ ವಿಳಂಬವಾಗುವುನ್ನು ತಡೆಯಲಾಗಿದೆ. ಜಮೀನಿಗೆ ದರ ನಿಗದಿಪಡಿಸುವ ಸಲುವಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿ, ಕೆಐಎಡಿಬಿಯ ವಿಶೇಷ ಅಧಿಕಾರಿ, ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಭೂ ಮಾಲೀಕರೊಂದಿಗೆ ಸಮಾಲೋಚಿಸಿ ಮಾರ್ಗಸೂಚಿ ದರ ನಿಗದಪಡಿಸುತ್ತಾರೆ. ಕೆಐಎಡಿಬಿ ವತಿಯಿಂದ ಭೂ ಸ್ವಾಧೀನಪಡಿಸಿದ ಜಮೀನಿಗೆ ಪಡೆಯುವ ಪರಿಹಾರ ಮೊತ್ತಕ್ಕೆ ಮೀರದ ಮೊತ್ತದಲ್ಲಿ ರೈತರು ಕೃಷಿ ಜಮೀನನ್ನು ಖರೀದಿಸಿದ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ಶೇ. 50ರಷ್ಟು ರಿಯಾಯಿತಿ ಮತ್ತು ನೋಂದಣಿ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.