ಬೆಂಗಳೂರು: ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದಿಂದ ತೆರವಾಗಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆಯಾ? ಅಥವಾ ಇಲ್ಲವಾ? ಎಂಬ ಪ್ರಶ್ನೆ ಉದ್ಭವವಾಗಿದೆ.
ಸಾಮಾನ್ಯವಾಗಿ ಹಾಲಿ ಶಾಸಕರ ರಾಜೀನಾಮೆಯಿಂದ ತೆರವಾದ ಅಥವಾ ಶಾಸಕರ ನಿಧನದಿಂದ ಖಾಲಿಯಾಗುವ ವಿಧಾನಸಭೆ ಕ್ಷೇತ್ರಕ್ಕೆ 6 ತಿಂಗಳೊಳಗೆ ಉಪ ಚುನಾವಣೆ ನಡೆಸುವುದು ಕೇಂದ್ರ ಚುನಾವಣಾ ಆಯೋಗದ ನಿಯಮದ ಪ್ರಕಾರ ಕಡ್ಡಾಯವಾಗಿದೆ. ಆದರೆ ರಾಜ್ಯದಲ್ಲಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುವುದು ಕೇವಲ 8 ತಿಂಗಳು ಬಾಕಿಯಿರುವಾಗ ಉಪ ಚುನಾವಣೆ ನಡೆಸಲಾಗುತ್ತದೆಯಾ ಎನ್ನುವ ಪ್ರಶ್ನೆಗಳು ರಾಜಕೀಯ ಪಕ್ಷಗಳನ್ನು ಕಾಡುತ್ತಿದೆ.
ಹುಕ್ಕೇರಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವುದು ಅಂತಿಮವಾಗಿ ಕೇಂದ್ರ ಚುನಾವಣಾ ಆಯೋಗದ ವಿವೇಚನೆಗೆ ಬಿಟ್ಟ ಸಂಗತಿ. ಆದರೆ ನಿಯಮಾವಳಿಗಳ ಪ್ರಕಾರ, 6 ತಿಂಗಳಿಗೂ ಹೆಚ್ಚು ಅವಧಿ ಬಾಕಿ ಉಳಿಯುವುದರಿಂದ ಕೇಂದ್ರ ಚುನಾವಣೆ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವುದಾದರೆ ಉಪ ಚುನಾವಣೆ ನಡೆಸಲೇಬೇಕು.
ದೇಶದ ಯಾವುದಾದರೂ ರಾಜ್ಯದ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ಸಂದರ್ಭದಲ್ಲಿ ಇತರೆ ರಾಜ್ಯಗಳಲ್ಲಿ ಖಾಲಿಯಿರುವ ವಿಧಾನಸಭೆ ಕ್ಷೇತ್ರಕ್ಕೆ ಆ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಉಪ ಚುನಾವಣೆ ನಡೆಸುವುದು ರೂಢಿಯಲ್ಲಿದೆ. ಈ ವರ್ಷದ ಅಂತ್ಯದಲ್ಲಿ ಅಥವಾ ಹೊಸ ವರ್ಷದ ಆರಂಭದ ತಿಂಗಳುಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆ ನಡೆಯುವುದರಿಂದ ಈ ರಾಜ್ಯಗಳ ಚುನಾವಣೆ ವೇಳಾಪಟ್ಟಿ ಪ್ರಕಟಿಸುವಾಗ ಹುಕ್ಕೇರಿ ಕ್ಷೇತ್ರಕ್ಕೂ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.