ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ರಾಜ್ಯ ಬಿಜೆಪಿ ವರಿಷ್ಠರ ಭೇಟಿ ಮಾಡಿದ ಸಂದರ್ಭ ನಿಗಮ-ಮಂಡಳಿ ಅಧ್ಯಕ್ಷರು ಸೇರಿದಂತೆ ಹಲವು ಮಹತ್ವದ ವಿಚಾರಗಳ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಇಂದು ಮಧ್ಯಾಹ್ನ ಅವರ ನಿವಾಸದಲ್ಲಿ ಹಾಗೂ ಸಂಜೆ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರನ್ನು ಭೇಟಿಯಾಗಿ ಸಿಎಂ ಸುದೀರ್ಘ ಚರ್ಚೆ ನಡೆಸಿದ್ದಾರೆ.
23 ನಿಗಮ ಮಂಡಳಿಗಳಿಗೆ ಪಕ್ಷದ ಕಾರ್ಯಕರ್ತರಿಗೆ ಹಂಚಿಕೆ ಮಾಡುವ ಪಟ್ಟಿ ಬಹುತೇಕ ಸಿದ್ಧವಾಗಿದ್ದು ಮುಂದಿನ ಸೋಮವಾರ ಅಧಿಕೃತ ಆದೇಶ ಪ್ರಕಟವಾಗಲಿದೆ. ಈ ಅಂತಿಮಗೊಂಡಿರುವ ಪಟ್ಟಿಗಳ ವಿಚಾರವಾಗಿ ಇಂದು ಉಭಯ ನಾಯಕರ ಜೊತೆ ಸಿಎಂ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ:ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಅಗತ್ಯ ಇಲ್ಲ: ಸಿದ್ದರಾಮಯ್ಯ
ಈಗಾಗಲೇ ಎರಡೂವರೆ ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರಿಂದ ರಾಜೀನಾಮೆ ಪಡೆದು ಪಕ್ಷದ ಕಾರ್ಯಕರ್ತರಿಗೆ ಹಂಚಿಕೆಗೆ ಆರ್.ಅಶೋಕ್, ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡದ ವರದಿಯ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಬಗ್ಗೆ ಅಂತಿಮ ಹಂತದ ಚರ್ಚೆ ಇಂದು ನಡೆದಿದೆ. ಇದಲ್ಲದೆ ಬೆಂಗಳೂರು ನಗರ ಹಾಗೂ ರಾಜ್ಯದಲ್ಲಿ ನೈಟ್ ಕರ್ಪ್ಯೂ ಮತ್ತು ವಾರಾಂತ್ಯ ಕರ್ಪ್ಯೂ ಬಗ್ಗೆ ಪಕ್ಷದ ಸಚಿವರು,ಪ್ರಮುಖ ನಾಯಕರ ವಿರೋಧದ ಹಿನ್ನಲೆಯಲ್ಲಿ ಕರ್ಪ್ಯೂ ರದ್ಧತಿ ಬಗ್ಗೆ ಗಂಭೀರ ಪರಾಮರ್ಷೆ ನಡೆದಿದೆ. ಪ್ರತಿಪಕ್ಷ ಕಾಂಗ್ರೆಸ್ ನಾಯಕರು ವಿವಿಧ ವಿಚಾರಗಳನ್ನು ಮುಂದಿಟ್ಟು ಸಿಎಂ ನಿವಾಸದ ಮುಂದೆ ಧರಣಿ ಕೂರಲು ತೀರ್ಮಾನಿಸಿದ್ದು ಇದನ್ನು ಯಾವ ರೀತಿ ಎದುರಿಸಬೇಕು ಎನ್ನುವ ಕುರಿತು ಸಹ ನಾಯಕರ ನಡುವೆ ಮಾತುಕತೆ ನಡೆದಿದೆ.