ಬೆಂಗಳೂರು:ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆ ಸಿಎಂ ಬಿ.ಎಸ್.ಯಡಿಯೂರಪ್ಪ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಅವರು ನೀತಿ ಸಂಹಿತೆಯ ನಂತರ ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಮಾಲಾರ್ಪಣೆಯ ನಂತರ ಮೀಸಲಾತಿ ಕುರಿತು ಎದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ವಾಲ್ಮೀಕಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸದ್ಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದರು.
ಕೋವಿಡ್ ಕಾರಣದಿಂದಾಗಿ ಈ ಬಾರಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿ, ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ನೀತಿ ಸಂಹಿತೆ ಮುಗಿದ ನಂತರ ವಾಲ್ಮೀಕಿ ಸಮುದಾಯದ ಮೀಸಲಾತಿ ಕುರಿತು ಚರ್ಚೆ ಈ ಬಾರಿ ವಾಲ್ಮೀಕಿ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ ಸಿಎಂ, ಅವರ ಹೆಸರುಗಳನ್ನು ಘೋಷಿಸಿದರು. ಡಾ. ಕೆ.ಆರ್.ಪಾಟೀಲ್, ಬಿ.ಎಲ್.ವೇಣು, ಗೌರಿ ಕೊರಗ, ಮಾರಪ್ಪ ನಾಯಕ, ತಿಪ್ಪೇಸ್ವಾಮಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದವರು.
ಸಿಎಂ ತೆರಳಿದ ಬಳಿಕ ಸಮುದಾಯದ ಮುಖಂಡರು ಮೀಸಲಾತಿಗೆ ಆಗ್ರಹಿಸಿ ವಾಲ್ಮೀಕಿ ಪ್ರತಿಮೆ ಮುಂದೆ ಘೋಷಣೆ ಕೂಗಿದರು. ನಂತರ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ನಾಲ್ಕು ದಶಕಗಳಿಂದ ಸಮುದಾಯ ಮೀಸಲಾತಿಯ ಬೇಡಿಕೆ ಇಡುತ್ತಾ ಬಂದಿದೆ. ಸದ್ಯ ನೀತಿ ಸಂಹಿತೆ ಜಾರಿಯಲ್ಲಿದ್ದು, ನವೆಂಬರ್ 10ರ ಬಳಿಕ ಸಿಎಂ ಜೊತೆ ಚರ್ಚಿಸಿ ಮೀಸಲಾತಿ ಹೆಚ್ಚಳದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಸಮುದಾಯದ ನಾಯಕ ಶ್ರೀರಾಮುಲು ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮಾತನಾಡಿ, ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇದೆ. ಅದಕ್ಕೆ ಸರ್ಕಾರ ಬದ್ಧವಾಗಿದೆ. ಕಳೆದ ಬಾರಿ ಮೂರು ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಐದು ಪ್ರಶಸ್ತಿ ನೀಡಲಾಗ್ತಿದೆ. ನೀತಿ ಸಂಹಿತೆ ಮುಗಿದ ಬಳಿಕ ಸಮುದಾಯದ ಅಪೇಕ್ಷೆಯನ್ನು ಘೊಷಣೆ ಮಾಡಲಾಗುತ್ತದೆ ಎಂದರು.