ಕರ್ನಾಟಕ

karnataka

ETV Bharat / state

ಕೈ ಪಾಳೆಯದಲ್ಲಿ ಶುರುವಾಗಿದೆ ಪರಿಷತ್​ ಪ್ರತಿಪಕ್ಷ ನಾಯಕ, ಸಚೇತಕರ ಆಯ್ಕೆ ಚರ್ಚೆ - Council election

ಜನವರಿ ತಿಂಗಳಲ್ಲಿ ತೆರವಾಗಲಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹಾಗೂ ಸಚೇತಕ ಸ್ಥಾನಕ್ಕೆ ನೇಮಕ ಕುರಿತು ಕಾಂಗ್ರೆಸ್​​ಲ್ಲಿ ಚರ್ಚೆ ಆರಂಭಗೊಂಡಿದೆ. ಜನವರಿ 5ಕ್ಕೆ ತೆರವಾಗುವ ಪ್ರತಿಪಕ್ಷ ನಾಯಕ ಹಾಗೂ ಸಚೇತಕ ಸ್ಥಾನಕ್ಕೆ ಹೊಸ ಸದಸ್ಯರನ್ನು ಕಾಂಗ್ರೆಸ್ ಹುಡುಕಿಕೊಳ್ಳಬೇಕಾಗಿದೆ.

council opposition leader
ಪ್ರತಿಪಕ್ಷ ನಾಯಕ, ಸಚೇತಕರ ಆಯ್ಕೆ

By

Published : Dec 5, 2021, 10:50 PM IST

ಬೆಂಗಳೂರು:ಮುಂಬರುವ ಜನವರಿ ತಿಂಗಳಲ್ಲಿ ತೆರವಾಗಲಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹಾಗೂ ಸಚೇತಕ ಸ್ಥಾನಕ್ಕೆ ನೇಮಕ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಚರ್ಚೆ ಆರಂಭವಾಗಿದೆ. ವಿಧಾನ ಪರಿಷತ್ ಸದಸ್ಯರಾಗಿ ಸುದೀರ್ಘ ಅವಧಿ ಕಳೆದಿರುವ ಮಾಜಿ ಸಚಿವ ಹಾಗೂ ಹಾಲಿ ಪ್ರತಿಪಕ್ಷ ನಾಯಕರಾಗಿರುವ ಎಸ್.ಆರ್. ಪಾಟೀಲರ ಸದಸ್ಯತ್ವ ಇದೇ ಬರುವ 2022 ರ ಜನವರಿ 5ಕ್ಕೆ ಮುಕ್ತಾಯವಾಗಲಿದೆ.

ಅದೇ ರೀತಿ ಸಚೇತಕರಾಗಿದ್ದ ಎಂ. ನಾರಾಯಣಸ್ವಾಮಿ ಅವರ ಕಾಲಾವಧಿಯೂ ಮುಕ್ತಾಯವಾಗುತ್ತಿದೆ. ವಿಧಾನ ಪರಿಷತ್​​ನ 25 ಸದಸ್ಯ ಸ್ಥಾನ ಇದೇ ಸಂದರ್ಭ ಖಾಲಿ ಆಗುತ್ತಿದ್ದು, ಡಿ.10ಕ್ಕೆ ಈ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಮೇಲಿನ ಇಬ್ಬರೂ ನಾಯಕರು ಮರು ಆಯ್ಕೆಗಾಗಿ ಕಣಕ್ಕಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಜನವರಿ 5ಕ್ಕೆ ತೆರವಾಗುವ ಪ್ರತಿಪಕ್ಷ ನಾಯಕ ಹಾಗೂ ಸಚೇತಕ ಸ್ಥಾನಕ್ಕೆ ಹೊಸ ಸದಸ್ಯರನ್ನು ಕಾಂಗ್ರೆಸ್ ಹುಡುಕಿಕೊಳ್ಳಬೇಕಾಗಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಾದ ಎಸ್.ಆರ್. ಪಾಟೀಲ್, ಪ್ರತಾಪ್ ಚಂದ್ರ ಶೆಟ್ಟಿ, ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್, ಶ್ರೀನಿವಾಸ್ ಮಾನೆ, ಆರ್. ಧರ್ಮಸೇನ, ಬಸವರಾಜ್ ಪಾಟೀಲ್ ಇಟಗಿ, ಎಂ.ಎ. ಗೋಪಾಲಸ್ವಾಮಿ, ಎಂ. ನಾರಾಯಣಸ್ವಾಮಿ, ರಘು ಆಚಾರ್ ಮತ್ತಿತರರ ಸದಸ್ಯತ್ವ ಕೊನೆಗೊಳ್ಳುತ್ತಿದೆ. ಇನ್ನು ಹಿರಿಯ ಸದಸ್ಯ ಸಿ.ಎಂ. ಇಬ್ರಾಹಿಂ ಜೆಡಿಎಸ್​​ನತ್ತ ವಾಲಿದ್ದಾರೆ.

ನಜೀರ್ ಅಹಮದ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರೇ ಸದ್ಯ ಹಿರಿಯ ಸದಸ್ಯರು. ಒಂದೊಮ್ಮೆ ಕೆ.ಸಿ. ಕೊಂಡಯ್ಯ ಈ ಸಾರಿ ಚುನಾವಣೆಯಲ್ಲಿ ಗೆದ್ದರೂ, ವಯಸ್ಸು ಹೆಚ್ಚಾಗಿರುವ ಹಿನ್ನೆಲೆ ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ಸಿಗುವುದು ಅನುಮಾನ. ಸದ್ಯ ಇರುವ ಹಿರಿಯ ಸದಸ್ಯರಲ್ಲಿ ಕೇವಲ ನಜೀರ್ ಅಹಮದ್ ಹಾಗೂ ಬಿ.ಕೆ. ಹರಿಪ್ರಸಾದ್ ನಡುವೆಯೇ ಸ್ಪರ್ಧೆ ಏರ್ಪಡಬೇಕು. ಆದರೆ ಇಲ್ಲಿ ಹರಿಪ್ರಸಾದ್​ಗೆ ಪಕ್ಷದ ಹೈಕಮಾಂಡ್ ಶ್ರೀರಕ್ಷೆ ಇದೆ. ಇದರಿಂದ ಸುಗಮವಾಗಿ ಇವರೇ ಅಭ್ಯರ್ಥಿ ಆಗುವಲ್ಲಿ ಸಂಶಯವಿಲ್ಲ.

ಸಚೇತಕ ಸ್ಥಾನಕ್ಕೆ ಒಂದಿಷ್ಟು ಸ್ಪರ್ಧೆ ಇದ್ದರೆ ಅದು ಸದಸ್ಯರಾದ ಕೆ. ಗೋವಿಂದರಾಜು, ಪಿ.ಆರ್. ರಮೇಶ್, ಆರ್.ಬಿ. ತಿಮ್ಮಾಪೂರ್ ಹಾಗೂ ಹಾಲಿ ಚುನಾವಣಾ ಕಣದಲ್ಲಿರುವ ಎಸ್. ರವಿ ಅವರ ನಡುವೆ ಸ್ಪರ್ಧೆ ಏರ್ಪಡಬಹುದು. ಇವರಲ್ಲಿ ತಿಮ್ಮಾಪೂರ್ ಮಾಜಿ ಸಚಿವರಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆ ಹೆಚ್ಚಿನ ಮಾನ್ಯತೆ ಸಿಗುವ ನಿರೀಕ್ಷೆ ಇದೆ. ಆದರೆ ಸದಸ್ಯರ ಸದಸ್ಯತ್ವದ ಕಾಲಾವಧಿ, ಕಾರ್ಯನಿರ್ವಹಣೆ ಇತ್ಯಾದಿಗಳನ್ನು ಗಮನಿಸಿ ರಾಜ್ಯ ಕಾಂಗ್ರೆಸ್ ನಾಯಕರು ಅವಕಾಶ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಪಕ್ಷದ ಹೈಕಮಾಂಡ್ ಸಹ ಆಯ್ಕೆಗೆ ಸಮ್ಮತಿ ನೀಡಬೇಕಿದೆ. 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಯಾರ್ಯಾರು ಗೆಲ್ಲಲಿದ್ದಾರೆ, ರಾಜ್ಯ ನಾಯಕರಲ್ಲಿ ಯಾರ ಪ್ರಭಾವ ಹೆಚ್ಚಿರಲಿದೆ ಎನ್ನುವುದರ ಮೇಲೆ ಮುಂದಿನ ಆಯ್ಕೆ ಇರಲಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಒಬ್ಬ, ಇಬ್ಬರಿಂದ ಕಾಂಗ್ರೆಸ್ ಉಸಿರಾಡುತ್ತಿದೆ, ಅದನ್ನು ನಿಲ್ಲಿಸುತ್ತೇನೆ : ಯಡಿಯೂರಪ್ಪ ಗುಡುಗು

ABOUT THE AUTHOR

...view details