ಬೆಳಗಾವಿ/ಬೆಂಗಳೂರು:ಕಬ್ಬಿನ ಕಟಾವು ಮತ್ತು ಸಾಗಾಣಿಕೆ ದರದ ಕುರಿತು ಎರಡು ತಿಂಗಳಿನಲ್ಲಿ ತಜ್ಞರ ಸಮಿತಿ ರಚಿಸಿ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ತೂಕದಲ್ಲಿ ಮೋಸ ಮಾಡುವ ಯಾವುದೇ ಕಾರ್ಖಾನೆ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ. ಯಾರು ಎಷ್ಟೇ ದೊಡ್ಡವರು ಇದರ ಹಿಂದೆ ಇದ್ದರೂ ಕ್ರಮ ಖಚಿತ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಸ್ಪಷ್ಟಪಡಿಸಿದ್ದಾರೆ.
ರೂಲಿಂಗ್ ನೀಡಿದ ಸಭಾಪತಿ: ಆದರೆ ಈ ಭರವಸೆ ವೇಳೆ ಚರ್ಚೆ ವಿಸ್ತೃತ ರೂಪ ಪಡೆದು ಸದನದಲ್ಲಿ ಧರಣಿ, ಗದ್ದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪ್ರಶ್ನೋತ್ತರದ ವೇಳೆ ಚರ್ಚೆಗೆ ಅವಕಾಶ ನೀಡಬಾರದು ಎನ್ನುವ ಸಿಎಂ ಸಲಹೆ ಪರಿಗಣಿಸಿ ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಪತಿ ರೂಲಿಂಗ್ ನೀಡಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಕಾಶ್ ರಾಥೋಡ್ ಮತ್ತು ಪಿ.ಆರ್ ರಮೇಶ್ ಜಂಟಿಯಾಗಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಬೇರೆ ರಾಜ್ಯದಲ್ಲಿ ಎಸ್ಇಪಿ ಕಾನೂನು ಇದೆ. ನಮ್ಮಲ್ಲಿ ಇನ್ನು ಜಾರಿಗೆ ತಂದಿಲ್ಲ.
ಎಫ್.ಆರ್.ಪಿ ಆಧಾರದ ಮೇಲೆ ಅನೇಕ ಕಾರ್ಖಾನೆಗಳು ಹೆಚ್ಚಿನ ಹಣ ಕೊಡುವ ಕೆಲಸ ಮಾಡುತ್ತಿವೆ. 92 ಕಾರ್ಖಾನೆಗಳಲ್ಲಿ 73 ಕಾರ್ಖಾನೆಗಳು ಕಬ್ಬು ಅರೆಯುವ ಕೆಲಸ ಆರಂಭಿಸಿವೆ. ಕಳೆದ ವರ್ಷಕ್ಕಿಂತಹ ಹೆಚ್ಚಿನ ಕಬ್ಬು ಅರೆಯುವ ನಿರೀಕ್ಷೆ ಇದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಬಿಟ್ಟರೆ ಮೂರನೇ ರಾಜ್ಯ ಕರ್ನಾಟಕವಾಗಿದೆ. ಸಕ್ಕರೆ ಕಾರ್ಖಾನೆಗಳು ಲಾಭದಾಯಕವಾಗುತ್ತಿವೆ. ರೈತನಿಗೆ ಪಾಲುದಾರಿಗೆ ಹೋಗಬೇಕು ಎಂದು ಮೊದಲ ಬಾರಿ ಕಬ್ಬಿನ ಉಪ ಉತ್ಪನ್ನದಲ್ಲಿ 50 ರೂ. ರೈತರಿಗೆ ಶೇರು ನೀಡುವ ಆದೇಶ ಮಾಡಿದ್ದೇವೆ. 202 ಕೋಟಿ ಮೊದಲ ಕಂತಿನಲ್ಲಿ ರೈತರಿಗೆ ಬಿಡುಗಡೆ ಮಾಡಲಿದ್ದೇವೆ.
ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ: ಎಫ್.ಆರ್.ಪಿ ಗಿಂತ ಹೆಚ್ಚಿನ ಹಣ ನೀಡಲು ಸಾಧ್ಯವಿಲ್ಲ ಎಂದು ದಕ್ಷಿಣ ಭಾರತ ಕಾರ್ಖಾನೆಗಳು ಕೋರ್ಟ್ ಮೆಟ್ಟಿಲೇರಿವೆ. ಆದರೆ ನಮ್ಮ ರಾಜ್ಯದ ಎಲ್ಲ ಭಾಗದಲ್ಲಿಯೂ ಎಫ್.ಆರ್.ಪಿ ಮೇಲೆ 150-200 ರೂ. ಹೆಚ್ಚು ಕೊಡುವ ಕೆಲಸ ಮಾಡುತ್ತಿವೆ. ಸರ್ಕಾರದ ಮನವಿಗೆ ಅನೇಕ ಸಕ್ಕರೆ ಕಾರ್ಖಾನೆ ಮಾಲೀಕರು ಸ್ಪಂದಿಸಿ ಹೆಚ್ಚು ಹಣ ನೀಡುತ್ತಿದ್ದಾರೆ. ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ರೈತರಿಗೆ ನಷ್ಟವಾಗುತ್ತಿದೆ.ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎನ್ನುವ ಆರೋಪ ಬರುತ್ತಿದೆ. ಪಕ್ಷಾತೀತವಾಗಿ ರೈತರ ಹಿತ ಕಾಪಾಡಲು ಎಲ್ಲ ಸಕ್ಕರೆ ಕಾರ್ಖಾನೆ ವಿರುದ್ಧ ದಾಳಿ ನಡೆಸಿ ಎಲ್ಲ ಅಂಕಿ ಅಂಶ ಪಡೆದಿದ್ದೇವೆ. ಯಾರು ರೈತರಿಗೆ ತೂಕದಲ್ಲಿ ಮೋಸ ಮಾಡಿದ್ದಾರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಉಪ ಉತ್ಪನ್ನದಲ್ಲಿ ರೈತರಿಗೆ ಪಾಲು ನೀಡಲು ಸಮಿತಿ ರಚಿಸಿದ್ದಂತೆ ಕಟಾವು ಮತ್ತು ಸಾಗಾಣಿಕ ದರದ ಬಗ್ಗೆಯೂ ಎರಡು ತಿಂಗಳ ಒಳಗಾಗಿ ಸಮಿತಿ ರಚಿಸುತ್ತೇವೆ. ಸರ್ಕಾರಿ ಕಾರ್ಖಾನೆಗಿಂತ ಖಾಸಗಿ ಕಾರ್ಖಾನೆಗಳೇ ಹೆಚ್ಚಿವೆ ಅವರು ನ್ಯಾಯಾಲಯಕ್ಕೆ ಹೋಗಬಹುದು. ಹಾಗಾಗಿ ತಜ್ಞರ ಸಮಿತಿ ರಚಿಸಿ ವರದಿ ಪಡೆದುಕೊಂಡು ನಂತರವೇ ಈ ಬಗ್ಗೆ ನಿರ್ಣಯ ಪ್ರಕಟಿಸಲಾಗುತ್ತದೆ ಎಂದರು.
ವಂಚನೆ ಮಾಡದಂತೆ ಲಕ್ಷ್ಮಣ ಸವದಿ ಮನವಿ: ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ, 21 ಕಡೆ ದಾಳಿ ಮಾಡಿದ್ದೀರಿ, ಆದರೆ ಎಲ್ಲಿಯೂ ತೂಕದಲ್ಲಿ ಮೋಸ ಮಾಡಿರುವ ದಾಖಲೆ ನಿಮಗೆ ಸಿಕ್ಕಿಲ್ಲ. ವಾಟ್ಸ್ ಆಪ್ ನಲ್ಲಿ ಒಂದು ನೈಜ ವಿಡಿಯೋ ನೋಡಿದ್ದೇನೆ. ಅದರಲ್ಲಿ 9 ತಿಂಗಳ ಗರ್ಭಿಣಿ ಕಬ್ಬು ಕಟಾವಿಗೆ ಬಂದಿದ್ದಳು, ಕಬ್ಬಿನ ಗದ್ದೆಯಲ್ಲೇ ಹೆರಿಗೆಯಾಗಿತ್ತು. ಮೂರು ದಿನದ ವಿರಾಮ ಪಡೆದು ಮಗುವನ್ನು ಅಲ್ಲೇ ಇರಿಸಿಕೊಂಡು ಕಬ್ಬು ಕಟಾವು ಮಾಡುತ್ತಿದ್ದಳು, ಅಂತಹ ಬಡವರು ರಕ್ತ ಸುರಿಸಿ, ಬೆವರು ಹರಿಸಿ ಕೆಲಸ ಮಾಡಿದ ಕೂಲಿಯ ಹಣದಲ್ಲಿ ಎರಡು ಟನ್ ಹೊಡೆದರೆ ನಿಮಗೆ ಒಳ್ಳೆಯದಾಗುತ್ತದೆಯಾ?.ಯಾರು ಇಂತಹ ವಂಚನೆ ಮಾಡುತ್ತಿದ್ದೀರೋ ಅದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.
ಮುರುಗೇಶ್ ನಿರಾಣಿಗೆ ಅನುಮತಿ ನಿರಾಕರಣೆ:ಈ ವೇಳೆ ಸಚಿವ ಮುರುಗೇಶ್ ನಿರಾಣಿ ಮಾತನಾಡಲು ಎದ್ದು ನಿಂತಾಗ ಸಭಾಪತಿ ಅನುಮತಿ ನಿರಾಕರಿಸಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅವರೂ ಮಂತ್ರಿ, ಸಕ್ಕರೆ ಕಾರ್ಖಾನೆ ಮಾಲೀಕರಿದ್ದಾರೆ ಅವರಿಗೆ ಮಾತನಾಡಲಿ ಬಿಡಿ ಎಂದು ಆಗ್ರಹಿಸಿದರು. ಆದರೆ ಅವಕಾಶಕ್ಕೆ ಸಭಾಪತಿ ನಿರಾಕರಿಸಿದರು. ಇದನ್ನು ಖಂಡಿಸಿ ಮರಿತಿಬ್ಬೇಗೌಡ ಸೇರಿ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಅವಕಾಶ ಕೊಡುವ ಭರವಸೆ ನಂತರ ಧರಣಿ ಕೈಬಿಟ್ಟರು.