ಬೆಂಗಳೂರು:ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಜನಪರವಾಗಿ ಕೆಲಸ ಮಾಡಬೇಕೆಂದು ಕಾಂಗ್ರೆಸ್ ಶಾಸಕರಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಈ ಸಂದೇಶ ರವಾನೆ ಮಾಡಿದ್ದಾರೆ.
ಅಧಿಕಾರ ಹಂಚಿಕೆ, ಸಚಿವ ಸ್ಥಾನ ಸೇರಿ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಇಂತಹ ವಿಷಯಗಳ ಬಗ್ಗೆ ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡಬಾರದು. ಇದು ಸರ್ಕಾರ ಹಾಗೂ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಶಾಸಕರಿಗೆ ಮನವರಿಕೆ ಮಾಡಿಕೊಡಲಾಗಿದೆ.
ರಾಜ್ಯದಲ್ಲಿ ಮಳೆಗೆ ಪ್ರಾಣ ಹಾನಿ, ಆಸ್ತಿ ಹಾನಿಯಾಗಿದೆ. ಮುಂದಿನ ದಿನಗಳ ಇನ್ನೂ ಹೆಚ್ಚಿನ ಮಳೆಯಾಗಲಿದೆ. ಶಾಸಕರು ತಮ್ಮ ಕ್ಷೇತ್ರಗಳ ಹೆಚ್ಚಿನ ಸಮಯ ಇದ್ದು, ಜನರ ಸಮಸ್ಯೆಗಳನ್ನು ಆಲಿಸಬೇಕು. ಜನ ಬದಲಾವಣೆ ಬಯಸಿ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ನಿರೀಕ್ಷೆಗಳನ್ನು ನಾವು ಉಳಿಸಿಕೊಳ್ಳಬೇಕು. ಈಗಾಗಲೇ ಈ ಸಂಬಂಧ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಡಿಸಿಗಳ ಬಳಿ ಸಾಕಷ್ಟು ಹಣ ಇದೆ. ಬೇಕಾದರೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುತ್ತದೆ. ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ರಸಗೊಬ್ಬರ, ಬೀಜ ಎಲ್ಲವೂ ದಾಸ್ತಾನಿದೆ. ಎಲ್ಲವನ್ನು ರೈತರಿಗೆ ತಲುಪುವಂತೆ ನೋಡಿಕೊಳ್ಳಿ ಎಂಬ ಸಲಹೆ-ಸೂಚನೆಗಳನ್ನು ಹೊಸ ಶಾಸಕರಿಗೆ ನೀಡಲಾಗಿದೆ.
ಲೋಕಸಭೆ ಚುನಾವಣೆ ವಿಚಾರ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ, ಚುನಾವಣೆಗೆ ಈಗಿನಿಂದಲೇ ಕೆಲಸ ಪ್ರಾರಂಭಿಸುವಂತೆ ತಿಳಿಸಿದರು. ಕ್ಷೇತ್ರದಲ್ಲಿ ಬೀಡುಬಿಟ್ಟು ಕೆಲಸ ಮಾಡಿ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ. ಇದು ಹೈಕಮಾಂಡ್ ನೀಡಿರುವ ಕಟ್ಟುನಿಟ್ಟಿನ ಸೂಚನೆ ಎಂದು ಶಾಸಕರಿಗೆ ವಿವರಿಸಿದರು.
ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಲೇಬೇಕು. ವಿಧಾನಸಭೆ ಚುನಾವಣೆ ಗೆದ್ದೆವು ಎಂದು ಸುಮ್ಮನೆ ಕೂರುವಂತಿಲ್ಲ. ಲೋಕಸಭೆ ಚುನಾವಣೆಯಲ್ಲೂ ಈ ಗೆಲುವಿನ ಯಾನ ಮುಂದುವರೆಯಬೇಕು. ಬಿಬಿಎಂಪಿ ಚುನಾವಣೆಯಲ್ಲೂ ವಿಜಯ ಸಾಧಿಸಬೇಕಿದೆ ಎಂದು ಹೇಳಿದರು.