ಬೆಂಗಳೂರು: ಕೃಷಿಯಲ್ಲಿ ಆಸಕ್ತಿಯುಳ್ಳ ಯುವ ಸಮುದಾಯವನ್ನು ಕೃಷಿ ಕ್ಷೇತ್ರದತ್ತ ಸೆಳೆಯುವ ಕಾರ್ಯಕ್ಕೆ ಸರ್ಕಾರ ಮುಂದಾಗಿದ್ದು, ಇದಕ್ಕಾಗಿಯೇ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಎರಡು ದಿನಗಳ ಕಾಲ ನಡೆದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮೇಲಿನ ಚರ್ಚೆ ನಂತರ ಉತ್ತರ ನೀಡಿದ ಅವರು, ಕಾನೂನಿನಲ್ಲಿ ಒಂದಿಷ್ಟು ಬದಲಾವಣೆ ಮಾಡಿದ್ದರಿಂದ ದೊಡ್ಡ ವ್ಯತ್ಯಾಸ ಆಗುವುದಿಲ್ಲ. ಕೃಷಿ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸುತ್ತೇವೆ. ಕೈಗಾರಿಕೆ ಉತ್ತೇಜನ ಮಾಡುತ್ತೇವೆ. ಹಾಗಂತ ಎಲ್ಲಾ ಭೂಮಿ ಕೈಗಾರಿಕೋದ್ಯಮಿಗಳ ಪಾಲಾಗುವುದಿಲ್ಲ. ಅವರನ್ನು ಉತ್ತೇಜಿಸುತ್ತೇವೆ. ಅವರ ಪ್ರಾಬಲ್ಯ ಹೆಚ್ಚಿಸುವ ಶ್ರಮ ಈ ಕಾನೂನು ತಿದ್ದುಪಡಿಯ ಮೂಲಕ ಮಾಡುತ್ತಿಲ್ಲ. 79 ಎ ಮತ್ತು ಬಿ ತಿದ್ದುಪಡಿ ವಿಚಾರ ವಿಧಾನಸಭೆಯಲ್ಲಿ ಚರ್ಚೆ ಆಗಿದೆ. 18 ವರ್ಷದ ಹಿಂದೆಯೇ ಈ ಬಗ್ಗೆ ಚರ್ಚೆ ನಡೆದಿದೆ. ಇದು ಇಂದು ಆಗುತ್ತಿರುವ ಹೊಸ ವಿಚಾರ ಅಲ್ಲ ಎಂದು ಹೇಳಿದರು.
1957ರಲ್ಲಿ ಬಿ.ಡಿ.ಜತ್ತಿ ಅವರ ಕಾಲಾವಧಿಯಲ್ಲಿ ಅವರ ನೇತೃತ್ವದಲ್ಲಿ 22 ಸದಸ್ಯರ ಸಮಿತಿ ರಚಿಸಿ ಈ ಒಂದು ಕಾಯ್ದೆ ಜಾರಿಗೆ ತರಲು ಮುಂದಾಯಿತು. 10 ಜನ ಸದಸ್ಯರಿದ್ದರೆ 432 ಎಕರೆ ಒಣ ಭೂಮಿ ಕೊಳ್ಳುವ ಅಧಿಕಾರ ಇದೆ ಎನ್ನಲಾಗಿತ್ತು. ಅಂದಿನ ಸ್ಥಿತಿಗೆ ಆ ಬದಲಾವಣೆ ಆಗಿತ್ತು. 1972ರಲ್ಲಿ ದೇವರಾಜ್ ಅರಸು ಕಾಲಾವಧಿಯಲ್ಲಿ ಕಾಯ್ದೆಗೆ ಬದಲಾವಣೆ ತರಲಾಯಿತು. 1979, 1995 ಮತ್ತು 2010ರಲ್ಲಿ ಮತ್ತೆ ಬದಲಾವಣೆ ತರಲಾಗಿತ್ತು. ಎಲ್ಲಾ ಸಂದರ್ಭದಲ್ಲೂ ಆದಾಯ ಮಿತಿ ಹೆಚ್ಚಿಸಿ 25 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇಷ್ಟು ವರ್ಷದಲ್ಲಿ ಒಟ್ಟಾರೆ 84 ಸಾವಿರ ಪ್ರಕರಣ ದಾಖಲಾಗಿದೆ. ಕಾಯ್ದೆ ಜಾರಿಗೆ ಬಂದು 40 ವರ್ಷ ಆಗಿದೆ. ಆದರೆ ಇದರ ಅಡಿ 3-4 ಎಕರೆ ಕೂಡ ಮಾರಾಟ ಆಗಿಲ್ಲ. 190.5 ಲಕ್ಷ ಹೆಕ್ಟೇರ್ ಭೂಮಿ ಇದೆ. 22 ಲಕ್ಷ ಹೆಕ್ಟೇರ್ ಬೀಳು ಬಿಟ್ಟ ಭೂಮಿ, 11 ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಭೂಮಿ ಬೀಳು ಬಿಡಲಾಗಿದೆ. 30 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಇದೆ. ಇವೆಲ್ಲಾ ಹಸನಾಗಿಸಲು ನಾವು ಯತ್ನಿಸುತ್ತಿದ್ದೇವೆ ಎಂದರು.
ರಫ್ತು ಉತ್ತೇಜನ:ರಾಜ್ಯವುರಫ್ತು ಕ್ಷೇತ್ರದಲ್ಲಿ 9ನೇ ಸ್ಥಾನದಲ್ಲಿದೆ. ಗುಜರಾತ್ ದೇಶದಲ್ಲೇ ಅತಿ ಹೆಚ್ಚು ಶೇ. 18.8ರಷ್ಟು ರಫ್ತು ಮಾಡುತ್ತಿದೆ. ರಾಜ್ಯದ ಪಾಲು ಶೇ. 5.7ರಷ್ಟು ಮಾತ್ರ. ನಮ್ಮ ರಾಜ್ಯದವರೂ ರಫ್ತಿನಲ್ಲಿ ಉತ್ತಮ ಸ್ಥಾನ ಹೊಂದಲು ಈ ತಿದ್ದುಪಡಿಯಿಂದ ಸಾಧ್ಯ. ಕೈಗಾರಿಕೆಗಳು ಲೂಟಿ ಮಾಡಲಿವೆ ಎಂದು ಸಾಕಷ್ಟು ಜನ ಹೇಳಿದ್ದಾರೆ. ಕೈಗಾರಿಕಾ ಪ್ರಗತಿ, ಉದ್ಯೋಗ ಸೃಷ್ಟಿ ದೃಷ್ಟಿಯಿಂದ ನಾವು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದ ಶೇ. 2ರಷ್ಟು ಭೂಮಿ ಕೊಡಿ, 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಈಗ ನೀಡಿರುವ ಭೂಮಿ ಕೇವಲ ಶೇ. 0.8ರಷ್ಟು ಮಾತ್ರ ಎಂದು ತಿಳಿಸಿದರು.
18 ವರ್ಷದ ಹಿಂದೆ ಸಾಕಷ್ಟು ಸದಸ್ಯರು ಇದೇ ಕಾಯ್ದೆ ಬಗ್ಗೆ ಚರ್ಚಿಸಿದ್ದಾರೆ. ದೇಶಪಾಂಡೆ ಅವರೇ ಅಂದು 79 ಎ ಮತ್ತು ಬಿ ತೆಗೆದು ಹಾಕಬೇಕು ಎಂದಿದ್ದರು. ಅಲ್ಲದೆ ರೈತ ನಾಯಕ ನಂಜುಂಡಸ್ವಾಮಿ ಅವರೇ 79ನೇ ವಿಧಿ ತೆಗೆದು ಹಾಕಲು ಒತ್ತಾಯಿಸಿದ್ದರು. ನಿರಂತರವಾಗಿ ಅಂದು ಸದಸ್ಯರು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಸದನಕ್ಕೆ ವಿವರಿಸಿದಾಗ, ಪ್ರತಿಪಕ್ಷ ಸದಸ್ಯರು ಈಗಿನ ಸರ್ಕಾರದ ಅಭಿಪ್ರಾಯ, ನಿರ್ಧಾರ ತಿಳಿಸಿ. ನಾವು ಅದನ್ನು ಕೇಳಲು ಕಾದಿದ್ದೇವೆ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಭೂಮಿ ಕೊಂಡವರು ನಷ್ಟವಾದರೆ 15 ವರ್ಷಗಳ ನಂತರ ಬೇರೆ ಉದ್ದೇಶಕ್ಕೆ ಮಾರಬಹುದು ಎಂಬ ನಿಯಮಕ್ಕೆ ಬದಲಾವಣೆ ತಂದು ನಾವು ಕೃಷಿ ಭೂಮಿಯನ್ನು ಕೃಷಿಗೆ ಬಳಸುವವರಿಗೇ ಮಾತ್ರ ಮಾರಬೇಕು ಎಂಬ ನಿಯಮ ತಂದಿದೆ. ಕೃಷಿ ಇರುವ ಕಡೆಯೇ ಕೃಷಿ ಆಧಾರಿತ ಕೈಗಾರಿಕೆ ಬಂದರೆ ಸಾಗಾಣಿಕೆ ವೆಚ್ಚ ಉಳಿಯಲಿದೆ. ಅಲ್ಲದೇ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಆಗಲಿದೆ. ಇದು ನಮ್ಮ ಆಶಯ. ಕೃಷಿಯಲ್ಲಿ ಆಧುನಿಕತೆ ಬರಬೇಕು. ಅಕ್ಕಪಕ್ಕದ ರಾಜ್ಯಗಳು ನಮಗಿಂತ ಮುಂದಿವೆ. ಆಧುನಿಕ ತಂತ್ರಜ್ಞಾನ ಹಳ್ಳಿಗೆ ಬಂದು, ವಿದ್ಯಾವಂತ ಯುವಕರು ಹಳ್ಳಿಗಳತ್ತ ವಾಪಸಾಗಬೇಕು. ರಾಜ್ಯದ ಉದ್ಯಮಿಗಳು ಭೂಮಿ ಸಿಗದೆ ಪಕ್ಕದ ರಾಜ್ಯಕ್ಕೆ ತೆರಳುವ ಅನಿವಾರ್ಯ ಈಗಿಲ್ಲ. ಎಸ್ಸಿ-ಎಸ್ಟಿ ಭೂಮಿ ವಿಚಾರ ಹಿಂದಿನಂತೆಯೇ ಇರಲಿದೆ, ಅದನ್ನು ಮುಟ್ಟಿಲ್ಲ. ನದಿ ಪಾತ್ರದ ಜಮೀನನ್ನು ಕೊಂಡವರು ಬೇರೆ ಕಾರ್ಯಕ್ಕೆ ಬಳಸುವಂತಿಲ್ಲ. ಸದುದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ. ಇಲ್ಲಿ ಮುಚ್ಚಿಡುವ ಅಜೆಂಡಾ ಯಾವುದೂ ಇಲ್ಲ, ಸರ್ಕಾರಿ ಜಮೀನು ಬಿಟ್ಟುಕೊಡುವುದಿಲ್ಲ. ಚಾಲ್ತಿಯಲ್ಲಿರುವ ಕೇಸ್ಗಳನ್ನು ವಾಪಸ್ ಪಡೆಯುತ್ತೇವೆ, ಪ್ರಭಾವಿಗಳು ಆಗಲೇ ಪ್ರಕರಣ ವಾಪಸ್ ಪಡೆದಿದ್ದಾರೆ. ಇದರಿಂದ ಪ್ರತಿಪಕ್ಷ ನಾಯಕರು, ಸದಸ್ಯರು ಬಿಲ್ ಅನುಮೋದಿಸಬೇಕೆಂದು ಮನವಿ ಮಾಡಿದರು.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, 86 ಸಾವಿರ ಎಕರೆ ಭೂಮಿ ಮಾತ್ರ ಕೆಐಎಡಿಬಿ ಅಡಿ ನೀಡಲಾಗಿದೆ. ಒಟ್ಟು 1 ಲಕ್ಷ 56 ಸಾವಿರ ಎಕರೆ ಮಾತ್ರ ಮಾರಾಟ ಆಗಿದೆ. ಇದು ಶೇ. 1ರಷ್ಟೂ ಅಲ್ಲ. ಇದರಿಂದ ಕೈಗಾರಿಕೆಗಳು ಬಂದು ಲೂಟಿ ಮಾಡುವ ಕಾರ್ಯ ಮಾಡಲ್ಲ. ಉಳುವವನೇ ಒಡೆಯ ಆಶಯ ಹೊಂದಿದ್ದ ದೇವರಾಜ್ ಅರಸು ಕನಸು ನನಸಾಗಿಸುವ ಯತ್ನ ಮಾಡುತ್ತಿದ್ದೇವೆ ಎಂದರು.