ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ ನಿವೇಶನ ಗುರುತಿಸಲು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಸೂಚಿಸಬೇಕೆಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಜೆಡಿಎಸ್ ಸದಸ್ಯ ಎಂ. ಶ್ರೀನಿವಾಸ್ ಅವರ ಪ್ರಶ್ನೆಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉತ್ತರಿಸುತ್ತಿದ್ದ ವೇಳೆ, ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ನೀವು ಅಧಿಕಾರಿಗಳಿಗೆ ನಿವೇಶನ ಗುರುತಿಸಲು ಸೂಚನೆ ಕೊಟ್ಟರೆ, ಅವರು ನಿವೇಶನ ಇಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಈ ಪರಿಸ್ಥಿತಿ ಇದೇ ರೀತಿ ಮುಂದುವರೆಯಬಾರದು. ಸ್ವತಃ ನೀವೇ ಡಿಸಿ ಮತ್ತು ಎಸಿಗಳಿಗೆ ಸ್ಥಳ ಗುರುತಿಸಲು ಸೂಚನೆ ನೀಡಬೇಕೆಂದು ನಿರ್ದೇಶಿಸಿದರು.
ಖಾಸಗಿ ಕಟ್ಟಡದಲ್ಲಿ ವಿದ್ಯಾರ್ಥಿನಿಲಯಗಳು ನಿರ್ವಹಣೆ ಮಾಡುವುದರ ಹಿಂದೆ ದೊಡ್ಡ ಲಾಬಿಯೇ ಇದೆ. ನೀವು ಪ್ರತಿ ಸಂದರ್ಭದಲ್ಲೂ ಇಂತಹ ಉತ್ತರ ಕೊಡುವುದು ಸರಿಯಲ್ಲ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮುಂದುವರೆಯಬಾರದು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 1031 ವಿದ್ಯಾರ್ಥಿ ನಿಲಯಗಳಿದ್ದು, ಇದರಲ್ಲಿ 695 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿವೆ. ಸ್ವಂತ ಕಟ್ಟಡ ಕಟ್ಟಲು ಹಣಕಾಸಿನ ಸಮಸ್ಯೆಯಿದೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪಿಸಿದ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, ಎಸ್ಸಿ - ಎಸ್ಟಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯಡಿ ನಿರ್ವಹಿಸುವ ವಿದ್ಯಾರ್ಥಿ ನಿಲಯಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ನಿರ್ವಹಣೆ ಮಾಡುವ ಹಾಸ್ಟೆಲ್‍ಗಳಿಗೆ ಯಾವುದೇ ರೀತಿಯ ಸೌಲಭ್ಯವಿಲ್ಲ.
ಅದರಲ್ಲೂ ಬಾಡಿಗೆ ಕಟ್ಟಡದಲ್ಲಿರುವ ಹಾಸ್ಟೆಲ್‍ಗಳ ಪರಿಸ್ಥಿತಿಯಂತೂ ಹೇಳುವುದಕ್ಕೆ ಆಗುವುದಿಲ್ಲ. ಅಂತಹ ಸ್ಥಿತಿಯಲ್ಲಿವೆ. ಶೌಚಾಲಯ, ಮಲಗುವ ಕೊಠಡಿ, ಕಾಂಪೌಂಡ್, ಮೂಲಸೌಕರ್ಯ ಯಾವುದೂ ಇರುವುದಿಲ್ಲ. ನಿಮಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯ ಅಮರೇಗೌಡ ಬೈಯಾಪೂರ ಸೇರಿ ಮತ್ತಿತರ ಸದಸ್ಯರು ಹಾಸ್ಟೆಲ್‍ಗಳ ದುಃಸ್ಥಿತಿ ತೆರೆದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲೆಲ್ಲಿ ಇಂತಹ ಸಮಸ್ಯೆಗಳಿದೆ ಎಂಬುದರ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುವುದು. ಜೊತೆಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.