ಕರ್ನಾಟಕ

karnataka

ETV Bharat / state

ಗುಂಡಿನ ಕುರಿತು ಪರಿಷತ್​ನಲ್ಲಿ ಸ್ವಾರಸ್ಯಕರ ಚರ್ಚೆ: ವಿಶ್ವನಾಥ್ ಮಾತಿಗೆ ನಗೆಗಡಲಲ್ಲಿ ತೇಲಿದ ಸದನ..! - ವಿಧಾನ ಪರಿಷತ್ ಕಲಾಪ

ವಿಧಾನ ಪರಿಷತ್ ವಿತ್ತೀಯ ಕಾರ್ಯಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಸದಸ್ಯರ ಮಧ್ಯೆ ಮದ್ಯದ ಬಗ್ಗೆ ಹಾಸ್ಯಮಯ ಚರ್ಚೆ ನಡೆಯಿತು

BJP member H Vishwanath
ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್

By

Published : Jul 19, 2023, 3:49 PM IST

ಬೆಂಗಳೂರು: ಬಜೆಟ್ ಮೇಲಿನ ಭಾಷಣ ಗುಂಡಿನತ್ತ ತಿರುಗಿ ವಿಧಾನ ಪರಿಷತ್ ಕಲಾಪದಲ್ಲಿ ಕೆಲ ಕಾಲ ಗುಂಡಿನ ಮತ್ತಿನ ಗಮ್ಮತ್ತು ಜೋರಾಗಿತ್ತು. ಗುಂಡಿನ ಚರ್ಚೆಗೆ ಇಡೀ ಸದನವೇ ನಗೆಗಡಲಲ್ಲಿ ತೇಲಾಡಿತು. ಸರ್ವ ರೋಗಕ್ಕೂ‌ ಸಾರಾಯಿ ಮದ್ದು ಎಂಬ ಮಾತಿದೆ ಎಂದು ಗುಂಡಿ‌ನ ಬಗೆಗಿನ ಚರ್ಚೆಯನ್ನು ಹಾಸ್ಯದ ರೀತಿಯಲ್ಲಿ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಸಮರ್ಥನೆ ಮಾಡಿಕೊಂಡರು.

ವಿಧಾನ ಪರಿಷತ್ ವಿತ್ತೀಯ ಕಾರ್ಯಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮೊದಲಿಗರಾಗಿ ಮಾತನಾಡಿದ ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್ ಕಾಂಗ್ರೆಸ್ ಬಜೆಟ್ ಬೆಂಬಲಿಸಿಕೊಂಡು ಮಾತನಾಡಿದರು. ಶಾಸನ ಸಭೆಗೆ ಬರೋದು ಜನರ ಸಮಸ್ಯೆ, ದುಃಖಗಳ ಬಗ್ಗೆ ಚರ್ಚೆ ಮಾಡುವುದಕ್ಕೆ. ಆದರೆ, ಇವತ್ತು ವ್ಯವಸ್ಥೆ ಬದಲಾಗಿದೆ. ಪ್ರತಿ ಸದಸ್ಯರು ಇವತ್ತು 2.5 ಲಕ್ಷದವರೆಗೂ ಸಂಬಳ ಪಡೆಯುತ್ತೇವೆ. ಸತ್ಯ ಹೇಳುವ ಧೈರ್ಯವನ್ನು ನಾವು ಕಳೆದುಕೊಂಡಿದ್ದೇವೆ. ನಮ್ಮ ಗೌರವವನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ. ನಾವೇ ದೊಡ್ಡವರು ಅಂತ ಹೇಳಿಕೊಳ್ಳುವ ಭರದಲ್ಲಿ ನಮ್ಮತನ ನಾವು ಕಳೆದುಕೊಂಡಿದ್ದೇವೆ. ಮಾಧ್ಯಮಗಳು ಮೊದಲು ಚರ್ಚೆಗಳು ಆಗುವ ರೀತಿಯಲ್ಲಿ ಸುದ್ದಿ ಮಾಡುತ್ತಿದ್ದವು.

ಆದರೆ, ಇವತ್ತು ನಮ್ಮ ಜಗಳಗಳೇ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿವೆ. ಬಜೆಟ್ ಬಗ್ಗೆ ಬಿಜೆಪಿ ನಾಯಕರು ಅನೇಕ ರೀತಿ ಮಾತನಾಡಿದ್ದಾರೆ. ಬಜೆಟ್ ಯಾವುದೋ ಪಕ್ಷಕ್ಕೆ ಕೊಡುವ ಬಜೆಟ್ ಅಲ್ಲ. ರಾಜ್ಯದ ಜನರಿಗೆ ಕೊಡುವ ಬಜೆಟ್ ಇದು. ಹಿಂದೆ ಪ್ರತಿ ಇಲಾಖೆಯ ಮೇಲೆ ಚರ್ಚೆ ಆಗುತ್ತಿತ್ತು. ಮಂತ್ರಿಗಳು ಓದಿಕೊಂಡು ಬರುತ್ತಿದ್ದರು, ಅಂದು ಸಿದ್ಧತೆ, ಬದ್ಧತೆ ಇತ್ತು. ಇವತ್ತು ಸಿದ್ಧತೆಯೂ ಇಲ್ಲ. ಬದ್ಧತೆಯೂ ಇಲ್ಲದ ಸದನ ಆಗಿದೆ. ಜನರು ಕೂಡಾ ಯಾವುದೋ ಭಜನಾ ಮಂಡಳಿ ಅಂತ ಕರೆಯುತ್ತಾರೆ ಎಂದು ಇಂದಿನ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದರು.

ಇಂದು ನಾವು ಬಳಸುತ್ತಿರುವ ಪದಗಳಿಂದ ನಾವು ನಮ್ಮ ಗೌರವ ಹಾಳು ಮಾಡಿಕೊಂಡಿದ್ದೇವೆ. ಇಂತಹ ವ್ಯವಸ್ಥೆಯನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು. ಮಾಧ್ಯಮಗಳು ಇದನ್ನ ಅರ್ಥ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಮತ ಪಡೆದವನೇ ಸಾರ್ವಭೌಮ ಎಂದು ಮಾಧ್ಯಮ ವರದಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ನಡೆದ ಐಎನ್​ಡಿಐಎ ಸಭೆಯನ್ನು ಭ್ರಷ್ಟರ ಸಭೆ ಅಂತಾರೆ. ಪರಮೋಚ್ಛ ಸ್ಥಾನದಲ್ಲಿ ‌ಇರೋ ಪ್ರಧಾನಿಗಳು ಹೀಗೆ ಹೇಳೋದು ಸರಿಯಲ್ಲ.‌ ಇದನ್ನು ನಾನು ಒಪ್ಪಲ್ಲ ಎಂದು ಪ್ರಧಾನಿ ಮೋದಿಗೆ ಮಾತಿಗೆ ವಿರೋಧ ವ್ಯಕ್ತಪಡಿಸಿದರು.

ಗುಂಡಿನ ಚರ್ಚೆ:ಅತೀ ಹೆಚ್ಚು ಜಿಎಸ್​ಟಿ ಕಟ್ಟುವುದು ನಾವು. ಜನ ಬೆಳಗ್ಗೆ ಎದ್ದಲ್ಲಿಂದ ರಾತ್ರಿ ಮಲಗೋವರೆಗೂ ಜಿಎಸ್ಟಿ ಕಟ್ಟುತ್ತೇವೆ. ಈ ವೇಳೆ ಗುಂಡಿನ ಬಗ್ಗೆ ಹೇಳಲಿಲ್ಲವಲ್ಲ ಎಂದು ಬಿಜೆಪಿ ಸದಸ್ಯರು ವಿಶ್ವನಾಥ್ ಕಾಲೆಳೆದರು. ಈ ವೇಳೆ, ಸಮ್ಮಿಶ್ರ ಸರ್ಕಾರದ ಪತನದ ವಿಚಾರ ಪ್ರಸ್ತಾಪ ಮಾಡಿದ ವಿಶ್ವನಾಥ್, ಸಮ್ಮಿಶ್ರ ಸರ್ಕಾರದ ಪತನ ಸಮಯದಲ್ಲಿ ವೈ ಎ ನಾರಾಯಣಸ್ವಾಮಿ ಮನೆಯಲ್ಲಿ ಸೇರುತ್ತಿದ್ದೆವು. ಸಮ್ಮಿಶ್ರ ಸರ್ಕಾರ ಪತನಕ್ಕೆ ನಾರಾಯಣಸ್ವಾಮಿ ಮನೆಯಲ್ಲಿ ಸೇರುವಾಗ ಗುಂಡು ಹೊಡೆಯುತ್ತಿದ್ದೆವು ಎಂದು, ಬಿಜೆಪಿ ಸದಸ್ಯರ ಕಾಲೆಳೆದರು.

ನಾರಾಯಣಸ್ವಾಮಿ ಮನೆಯಲ್ಲಿ ಎಣ್ಣೆ ಹೊಡೆದಿದ್ದೇವೆ ಎಂದಿದ್ದ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ, ಯಾವ ನಾರಾಯಣಸ್ವಾಮಿ ಎಂದು ವಿಶ್ವನಾಥ್ ಹೇಳಬೇಕು. ನಾನು ಈ ಎಣ್ಣೆ ವಿಚಾರದಲ್ಲಿ‌ ಇಲ್ಲ ಎಂದರು. ಈ ವೇಳೆ, ಸದನದಲ್ಲಿ ಹಾಸ್ಯದ ಹೊನಲು ಹರಿಯಿತು. ವಿಶ್ವನಾಥ್ ಮಾತಿಗೆ ಸದನದಲ್ಲಿ 10 ನಿಮಿಷ ಗುಂಡಿನ ಬಗ್ಗೆ ಚರ್ಚೆಯಾಯಿತು. ತೇಜಸ್ವಿನಿ ಗೌಡ, ರವಿಕುಮಾರ್, ಕಾಂಗ್ರೆಸ್ ‌ಸದಸ್ಯರ ನಡುವೆ ಹಾಸ್ಯಭರಿತ ಎಣ್ಣೆ ಬಗ್ಗೆ ಚರ್ಚೆಯಾಯಿತು.

ನಂತರ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ನಾನು ವಿಶ್ವನಾಥ್ ಜೊತೆಗೆ ಇದ್ದೆ. ವಿಶ್ವನಾಥ್ ಈಗ ಗುಂಡು ಹೊಡೆಯುವುದು ಬಿಟ್ಟಿದ್ದಾರೆ. ಬಜೆಟ್ ಬಗ್ಗೆ ಮಾತನಾಡುವಾಗ ಲಾಟರಿ, ಸಾರಾಯಿ ನಿಷೇಧ ಮಾಡಿದ್ದು ಸರ್ಕಾರಕ್ಕೆ ಹೇಳಿ ಎಂದು ಕಿಚಾಯಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್ ಮದ್ಯದ ಸುಂಕ ಹೆಚ್ಚಾಗಿದೆ. ಮದ್ಯಪ್ರಿಯರ ಬಗ್ಗೆ ಕಾಳಜಿಯಿಂದ ಇದರ ಬಗ್ಗೆಯೂ ಬೆಳಕು ಚೆಲ್ಲಲಿ ಎಂದರು‌. ತೇಜಸ್ವಿನಿ ಗೌಡ ಮಾತನಾಡಿ, ಇದರ ಬಗ್ಗೆ ಈಗ ಬೆಳಕನ್ನ ಚೆಲ್ಲಲು ಆಗುವುದಿಲ್ಲ. ಇದು ರಾತ್ರಿಯಲ್ಲಿ ನಡೆಯುವ ವಿಷಯ ಎಂದು ಹಾಸ್ಯ ಚಟಾಕಿ ಹಾರಿಸಿದರು. ಭಾರತಿ ಶೆಟ್ಟಿ ಮಾತನಾಡಿ, ಗುಂಡು ಹೊಡೆದವರ ಜೊತೆ ನಾವು ಬದುಕುತ್ತಿದ್ದೇವೆ ಎಂದರು. ಬಿಜೆಪಿ ಸದಸ್ಯರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಭಾನಾಯಕ ಬೋಸರಾಜ್, ಗುಂಡು ಹಾನಿಕರ ಎಂದು ಅದನ್ನು ಕಡಿವಾಣ ಹಾಕಬೇಕೆಂದು ಅದರ ಮೇಲೆ ಸುಂಕ ಹೆಚ್ಚು ಮಾಡಿದ್ದೇವೆ ಎಂದು ಅಬಕಾರಿ ಸುಂಕ ಹೆಚ್ಚಳವನ್ನು ಸಮರ್ಥಿಸಿಕೊಂಡರು.

ನಂತರ ಮಾತನಾಡಿದ ವಿಶ್ವನಾಥ್, ಗುಂಡಿನ ಬಗ್ಗೆ ಚರ್ಚೆ ವೇಳೆ ಮಾತಾಡುತ್ತಿದ್ದ ಭಾರತಿ ಶೆಟ್ಟಿ, ತೇಜಸ್ವಿನಿ ಗೌಡ ಇಬ್ಬರಿಗೂ ಟಾಂಗ್ ಕೊಟ್ಟರು. ಗುಂಡು ಹೊಡೆಯದೇ ಇರುವ ಇವರಿಗೆ ಇಷ್ಟು ಗುಂಡಿಗೆ ಇರೋದಾದರೆ ಗುಂಡು ಹಾಕೋ ನಮಗೆ ಎಷ್ಟು ಗುಂಡಿಗೆ ಇರಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ನಾವು ಗೆದ್ದಾಗಲೂ ಕುಡಿಯುತ್ತೇವೆ. ಸೋತಾಗಲೂ ಕುಡಿಯುತ್ತೇವೆ. ಸತ್ತಾಗಲೂ ಕುಡಿಯುತ್ತೇವೆ. ಸರ್ವ ರೋಗಕ್ಕೂ‌ ಸಾರಾಯಿ ಮದ್ದು ಅಂತ ಮಾತಿದೆ ಎಂದು ಗುಂಡಿ‌ನ ಬಗೆಗಿನ ಚರ್ಚೆಯನ್ನು ಹಾಸ್ಯದ ರೀತಿ ಸಮರ್ಥನೆ ಮಾಡಿಕೊಂಡರು.

ಬಡವರ ಮನೆಗೆ ಅನ್ನ ಕೊಟ್ಟ ಸಿದ್ದರಾಮಯ್ಯ:ನಂತರ ಈ ಹಿಂದೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳಾದ ದೇವರಾಜ್ ಅರಸ್, ಕೆಸಿ ರೆಡ್ಡಿ, ಗುಂಡೂರಾವ್, ರಾಮಕೃಷ್ಣ ಹೆಗಡೆ, ಕೆಂಗಲ್ ಹನುಮಂತಯ್ಯ, ಜೆ.ಎಚ್. ಪಟೇಲ್, ದೇವೇಗೌಡರು, ಎಸ್.‌ಎಂ. ಕೃಷ್ಣ, ಬಂಗಾರಪ್ಪ, ವೀರಪ್ಪ ಮೊಯ್ಲಿ, ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಸಿಎಂ ಆಗಿದ್ದಾಗ ಏನೇನು ಮಾಡಿದ್ದರು ಅಂತ ಹೇಳಿದ ವಿಶ್ವನಾಥ್, ಎಲ್ಲರೂ ರಾಜ್ಯದ ಅಭಿವೃದ್ಧಿಗೆ ಒಂದಿಲ್ಲೊಂದು ಸಹಾಯ ಮಾಡಿದ್ದಾರೆ. ಅದೇ ರೀತಿ ಬಜೆಟ್​ಗೂ ಮುನ್ನ ಕಾಂಗ್ರೆಸ್​ನವರು 5 ಗ್ಯಾರಂಟಿ ಘೋಷಣೆ ಮಾಡಿದ್ದರು. ಬಡವರ ಅನ್ನವನ್ನು ತಿರಸ್ಕಾರದ ರೂಪದಲ್ಲಿ ನೋಡಬಾರದು. ಅನ್ನ ದೇವರನ್ನು ಬಡವರ ಮನೆಗೆ ಕೊಟ್ಟ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ ಎಂದು ಸರ್ಕಾರದ ಪರ ಮತ್ತು ಸಿದ್ದರಾಮಯ್ಯ ಪರ ಮಾತನಾಡಿದರು.

ಪೇಟೆ ನೋಡದ ಹೆಣ್ಣು ಮಕ್ಕಳು ಸಿಟಿ ನೋಡ್ತಿದ್ದಾರೆ:2 ಸಾವಿರ ರೂ. ನೀಡುವ ಯೋಜನೆಯಿಂದ ಮಹಿಳೆಗೆ ಒಂದು ಬಜೆಟ್ ಆಯಿತು. ಅದರಿಂದ ಅವರು ಕೆಲಸ ಮಾಡಿಕೊಳ್ಳುವ ಹಾಗೆ ಆಯಿತು. ಉಚಿತ ಬಸ್ ಯೋಜನೆ ಬಹಳಷ್ಟು ಉತ್ತಮ ಯೋಜನೆ‌. ಪೇಟೆ ನೋಡದ ಹೆಣ್ಣು ಇವತ್ತು ಸಿಟಿ ನೋಡುತ್ತಿದ್ದಾಳೆ. ದೇವಸ್ಥಾನಕ್ಕೆ ಹೋಗಿ ಮನಸು ಹಗುರ ಮಾಡಿಕೊಂಡು ಮಹಿಳೆ ಬರುತ್ತಿದ್ದಾಳೆ ಎನ್ನುತ್ತಾ ಅಸಾಂವಿಧಾನಿಕ ಪದವೊಂದನ್ನು ವಿಶ್ವನಾಥ್ ಬಳಸಿದರು. ವಿಶ್ವನಾಥ್ ಮಾತಿಗೆ ತೇಜಸ್ವಿನಿಗೌಡ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಸಮ್ಮತಿಸಿದ ಉಪ ಸಭಾಪತಿ ಪ್ರಾಣೇಶ್ ಆ ಪದವನ್ನು ಕಡತದಿಂದ ತೆಗೆಸಿದರು.

ನಂತರ ಮಾತು ಮುಂದುವರೆಸಿ, 200 ಯೂನಿಟ್ ವಿದ್ಯುತ್ ಯೋಜನೆ ಪ್ರಸ್ತಾಪಿಸಿದರು. ಇಂಧನ ಇಲಾಖೆಯಲ್ಲಿ ಸೋರಿಕೆ ಜಾಸ್ತಿ ಇದೆ. ಇದನ್ನು ಸರಿ ಮಾಡಿದರೆ ಎಲ್ಲರಿಗೂ ಉಚಿತ ವಿದ್ಯುತ್ ಕೊಡಬಹುದು. ಅಧಿಕಾರಗಳು ಇವತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. 5 ಗ್ಯಾರಂಟಿಗಳನ್ನು ಮುಕ್ತ ಕಂಠದಿಂದ ನಾನು ಸ್ವಾಗತ ಮಾಡುತ್ತೇನೆ. ಎಸ್ಸಿ - ಎಸ್ಟಿ, ಮಹಿಳೆ ‌ಮತ್ತು ಮಕ್ಕಳಿಗೆ ಈ ಬಜೆಟ್​ನಲ್ಲಿ ಒತ್ತು ಕೊಟ್ಟಿದ್ದಾರೆ ಎಂದು ಬಜೆಟ್ ಬೆಂಬಲಿಸಿ ಮಾತನಾಡಿದರು.

ಕನ್ನಡ ಪುಸ್ತಕ ಖರೀದಿಗೆ 10 ಕೋಟಿ ಕೊಟ್ಟಿರುವುದನ್ನು ಸ್ವಾಗತ ಮಾಡುತ್ತೇವೆ. ‌ರಾಜ್ಯದ ಹಣ ಸೋರಿಕೆ ಆಗುತ್ತಿದೆ, ನಿವೃತ್ತಿ ಆದ ಮೇಲೂ 2500 ಜನ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ದುಂದು ವೆಚ್ಚ ಆಗುತ್ತಿದೆ. ಔಟ್ ಸೋರ್ಸ್​​ನಲ್ಲಿ ಕೆಲಸ ಆಗುತ್ತಿದೆ. ಏಜೆನ್ಸಿ ಅವರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಔಟ್ ಸೋರ್ಸ್ ಅನ್ನೋದು ದೊಡ್ಡ ದಂಧೆ. ಇದರ ಏಜೆಂಟ್​ಗಳು ಯುಎಎಸ್, ಐಪಿಎಸ್ ಅಧಿಕಾರಿಗಳ ಸಂಬಂಧಿಗಳು, ಸ್ನೇಹಿತರೇ ಆಗಿರುತ್ತಾರೆ. ಔಟ್ ಸೋರ್ಸ್ ಅನ್ನೋದು ದೊಡ್ಡ ದಂಧೆ, ರಾಕೆಟ್. ಈ‌ ಎಲ್ಲ ದುಂದು ವೆಚ್ಚ ತಡೆಯಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ:Suspected terrorist arrest: ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗುತ್ತಿದೆ.. ಮಾಜಿ ಸಿಎಂ ಬೊಮ್ಮಾಯಿ ಆತಂಕ

ABOUT THE AUTHOR

...view details