ಬೆಂಗಳೂರು:ಪ್ರಥಮ ಹಂತದಲ್ಲಿ ಇಸ್ಕಾನ್ ಸಂಸ್ಥೆ ನೀಡಿರುವ ಅಗತ್ಯ ಅಡುಗೆ ಸಾಮಗ್ರಿ ಕಿಟ್ ಹಾಗೂ ಎರಡನೇ ಹಂತದಲ್ಲಿ ಕಾರ್ಮಿಕ ಇಲಾಖೆ ನೀಡಿರುವ ರೇಷನ್ ಕಿಟ್ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ. ಕೇವಲ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ, ವಾರ್ಡ್ಗಳಿಗೆ ಆಹಾರ ಹಂಚಿಕೆಯಾಗಿದೆ ಎಂದು ಬಿಬಿಎಂಪಿ ಪ್ರತಿ ಪಕ್ಷದ ನಾಯಕರು ಗಂಭೀರ ಆರೋಪ ಮಾಡಿದರು.
ಪಾಲಿಕೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿರುವ ಬಜೆಟ್ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ಒಟ್ಟು 28 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯ ಅರವಿಂದ ಲಿಂಬಾವಳಿ ಶಾಸಕರಾಗಿರುವ ಮಹಾದೇವಪುರ ಕ್ಷೇತ್ರಕ್ಕೆ 22 ಸಾವಿರ ರೇಷನ್ ಕಿಟ್ ಹೋಗಿದೆ. ಎಸ್. ಆರ್.ವಿಶ್ವನಾಥ್ ಅವರ ಯಲಹಂಕ ಕ್ಷೇತ್ರಕ್ಕೆ 16 ಸಾವಿರ ಕಿಟ್, ಆರ್ .ಮಂಜುನಾಥ್ ಕ್ಷೇತ್ರದ ದಾಸರಹಳ್ಳಿಗೆ 5 ಸಾವಿರ ಕಿಟ್, ಸತೀಶ್ ರೆಡ್ಡಿಯವರ ಬೊಮ್ಮನಹಳ್ಳಿ ಕ್ಷೇತ್ರಕ್ಕೆ 4,500 ಕಿಟ್ ಹಂಚಿಕೆಯಾಗಿದೆ. ಕೇವಲ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಮಾತ್ರ ಬಡವರು,ಕೂಲಿ ಕಾರ್ಮಿಕರು ಇದ್ದಾರಾ ಎಂದು ಪ್ರಶ್ನಿಸಿದರು.