ಕರ್ನಾಟಕ

karnataka

ಗ್ರಾಹಕರಿಗೆ ಬಿಡಿಎ ಕೊಡುಗೆ: ಫ್ಲಾಟ್​ಗಳ ಮೇಲೆ ಶೇ. 5 ರಿಂದ 10 ರಿಯಾಯಿತಿ.. ಎಸ್​ ಆರ್​ ವಿಶ್ವನಾಥ್

By

Published : Mar 28, 2023, 7:53 PM IST

ಕಣಿಮಿಣಿಕೆಯಲ್ಲಿ ಸಾರ್ವಜನಿಕರಿಗೆ ಶೇ. 5ರಿಂದ 10ರಷ್ಟು ರಿಯಾಯಿತಿ ದರದಲ್ಲಿ ಫ್ಲಾಟ್​ಗಳನ್ನು ಹಂಚಲು ನಿರ್ಧರಿಸಿದ್ದೇವೆ ಎಂದು ಬಿಡಿಎ ಅಧ್ಯಕ್ಷ ಎಸ್​ ಆರ್​ ವಿಶ್ವನಾಥ್​ ತಿಳಿಸಿದ್ದಾರೆ.

ಬಿಡಿಎ ಅಧ್ಯಕ್ಷ ವಿಶ್ವನಾಥ್
ಬಿಡಿಎ ಅಧ್ಯಕ್ಷ ವಿಶ್ವನಾಥ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮನೆಕೊಳ್ಳಬೇಕೆಂದು ಬಯಸುವವರ ಆಸೆ ಈಡೇರಿಕೆಗಾಗಿ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದೆ. ಶೇ. 5 ರಿಂದ 10 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ ಎಂದು ಬಿಡಿಎ ಅಧ್ಯಕ್ಷ ಎಸ್​ ಆರ್​ ವಿಶ್ವನಾಥ್ ಮಾಹಿತಿ ನೀಡಿದ್ದಾರೆ.

ಇಂದು ಬಿಡಿಎ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ವಿಶ್ವನಾಥ್, ಕಣಿಮಿಣಿಕೆಯಲ್ಲಿ ಸಾರ್ವಜನಿಕರಿಗೆ ಶೇ. 5ರಿಂದ 10ರಷ್ಟು ರಿಯಾಯಿತಿ ದರದಲ್ಲಿ ಫ್ಲಾಟ್​ಗಳನ್ನು ಹಂಚಲು ನಿರ್ಧರಿಸಿದ್ದೇವೆ. ಬಿಡಿಎ ಮೂಲಕ ನಿರ್ಮಿಸಿರುವ ಎರಡು ಬಿಹೆಚ್​ಕೆ ಮನೆಯ ಮೇಲೆ ಶೇ. 10 ಮತ್ತು ಮೂರು ಬಿಹೆಚ್‍ಕೆ ಮನೆಯ ಫ್ಲಾಟ್​ಗಳ ಮೇಲೆ ಶೇ. 5ರ ರಿಯಾಯಿತಿ ನೀಡಲು ತೀರ್ಮಾನಿಸಿದ್ದೇವೆ. ಇದು ಬೆಂಗಳೂರು ನಾಗರಿಕರಿಗೆ ನೀಡುತ್ತಿರುವ ಯುಗಾದಿ ಉಡುಗೊರೆ. ಜನ ಈ ಕೊಡುಗೆಯ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಬಿಡಿಎ ಆಸ್ತಿ ವಶ :ಕಳೆದ ಎರಡು ವರ್ಷದಲ್ಲಿ ಅಂದರೆ 2020ರ ಡಿ.1 ರಿಂದ ಇದುವರೆಗೂ ನಡೆಸಿದ ಕಾರ್ಯಾಚರಣೆಯಲ್ಲಿ ಬಿಡಿಎಗೆ ಸಂಬಂಧಿಸಿದ 2 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅಲ್ಲದೇ ಭೂಕಬಳಿಕೆದಾರರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇವೆ. ಇವರ ವಿರುದ್ಧ ಸಮರವನ್ನು ಸಹ ಮುಂದುವರಿಸಿದ್ದೇವೆ. ಹೋರಾಟವನ್ನು ತಡೆಯಲು ಎಷ್ಟೇ ಪ್ರಯತ್ನ ನಡೆಸಿದರೂ ಸೊಪ್ಪು ಹಾಕಲ್ಲ. ಪ್ರಭಾವಿಗಳು ಇಲ್ಲಿ ಇದ್ದರೂ ಕಠಿಣ ಕ್ರಮ ಆಗಲಿದೆ. ಯಾವುದೇ ಪ್ರಭಾವಕ್ಕೆ ಮಣಿಯುವುದಿಲ್ಲ ಎಂದು ಅವರು ವಿವರಿಸಿದರು.

ಮಧ್ಯವರ್ತಿಗಳ ಹಸ್ತಕ್ಷೇಪ ಎದುರಾಗದು:ಬಿಡಿಎ ಅಂದರೆ ಮಧ್ಯವರ್ತಿಗಳು, ಏಜೆಂಟರ ತಾಣ ಎಂಬ ಹಣೆಪಟ್ಟಿ ಇತ್ತು. ಅದನ್ನು ಸಾಕಷ್ಟು ಬದಲಿಸಲಾಗಿದೆ. ಸಾರ್ವಜನಿಕರು ನೇರವಾಗಿ ತಮಗೆ ಆಗಬೇಕಾದ ಕೆಲಸಕ್ಕಾಗಿ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಿ ತ್ವರಿತವಾಗಿ ತಮ್ಮ ಅಹವಾಲು ಪರಿಹರಿಸಿಕೊಳ್ಳಬಹುದು. ಇದೀಗ ಜನರು ಇಲ್ಲಿನ ಯಾವುದೇ ಕೆಲಸಕ್ಕೆ ಮಧ್ಯವರ್ತಿಗಳ ಹಸ್ತಕ್ಷೇಪ ಎದುರಾಗದು. ಅತ್ಯಂತ ಸರಳ ಹಾಗೂ ನೇರವಾಗಿ ಕಾರ್ಯನಿರ್ವಹಣೆ ಮಾಡುವ ಕಾರ್ಯ ಆಗಲಿದೆ ಎಂದು ವಿವರಿಸಿದರು. ಕಳೆದೆರಡು ವರ್ಷದಲ್ಲಿ ಮೂಲೆ ಮತ್ತು ಮಧ್ಯಂತರ ನಿವೇಶನಗಳನ್ನು ಹರಾಜು ಹಾಕಿ ಬಿಡಿಎಗೆ 3,553 ಕೋಟಿ ಹರಿದು ಬಂದಿದೆ. ಸಾಲ ಮುಕ್ತ ಬಿಡಿಎ ಮಾಡಿರುವುದು ನಮ್ಮ ಸರ್ಕಾರದ ಹೆಗ್ಗಳಿಕೆ ಎಂದು ವಿಶ್ವನಾಥ್ ವಿವರಿಸಿದರು.

ಕೆಂಪೇಗೌಡ ಬಡಾವಣೆಗೆ 1,361 ಕೋಟಿ ರೂ. ಖರ್ಚು ಮಾಡಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಅರ್ಕಾವತಿ ಬಡಾವಣೆ ಅಭಿವೃದ್ಧಿಗೆ 360 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸರ್ವಜ್ಞನಗರದಲ್ಲಿ 9.31 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬಿಡಿಎ ವತಿಯಿಂದ ಅಂಜನಾಪುರ, ಬನಶಂಕರಿ 6ನೇ ಹಂತ, ವಿಶ್ವೇಶ್ವರ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳ ಅಭಿವೃದ್ಧಿಗೆ ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

22 ಸಾವಿರ ನಿವೇಶನ ಹಂಚಿಕೆ ಗುರಿ: ಬಿಡಿಎ ಮೂಲಕ ರಿಂಗ್ ರಸ್ತೆ ಚಂದ್ರಾಲೇಔಟ್ ಬಳಿ ನಿರ್ಮಿಸಿರುವ 120, 3 ಬಿಹೆಚ್‍ಕೆ ಫ್ಲಾಟ್​ಗಳನ್ನು ನಿರ್ಮಿಸಲಾಗಿದ್ದು, ಕೋನದಾಸಪುರದಲ್ಲೂ 672 ಫ್ಲಾಟ್​ಗಳ ಅಪಾರ್ಟ್‍ಮೆಂಟ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಆನ್‍ಲೈನ್ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಬಹುನಿರೀಕ್ಷಿತ ಡಾ ಶಿವರಾಮಕಾರಂತ ಬಡಾವಣೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ 5337 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಬಡಾವಣೆಗೆಂದು ಭೂಮಿ ನೀಡಿದ ರೈತರು ಸೇರಿದಂತೆ ಸಾರ್ವಜನಿಕರಿಗೆ ಸುಮಾರು 22 ಸಾವಿರ ನಿವೇಶನ ಹಂಚಿಕೆ ಗುರಿ ಹೊಂದಲಾಗಿದೆ ಎಂಬ ವಿವರ ನೀಡಿದರು.

ಇದನ್ನೂ ಓದಿ :ಎಲ್ಲಾ ಲಂಚ ಪ್ರಕರಣಗಳ ತನಿಖೆಗೆ ಎಸ್​ಐಟಿಗೆ ವಹಿಸುವಂತೆ ಪಿಐಎಲ್​.. ಶ್ರೀರಾಮ ಸೇನೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್​

ABOUT THE AUTHOR

...view details