ಬೆಂಗಳೂರು: ಬಿಜೆಪಿ ಜೊತೆಗಿನ ಮೈತ್ರಿ ವಿಚಾರಕ್ಕೆ ಜೆಡಿಎಸ್ನಲ್ಲಿ ಸ್ಫೋಟಗೊಂಡಿರುವ ಅಸಮಾಧಾನದ ಹೊಗೆ ಇನ್ನೂ ಆರಿಲ್ಲ. ಇದು ಜೆಡಿಎಸ್ ನಾಯಕರಿಗೆ ತಲೆನೋವು ತಂದಿಟ್ಟಿದೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ದಳಪತಿಗಳಿಗೆ ಖುಷಿಯಿಲ್ಲ. ಪಕ್ಷದ ಎಂಟತ್ತು ಶಾಸಕರಿಗೆ ಮೈತ್ರಿ ಇಷ್ಟವಿಲ್ಲ. ಹಾಗೆಂದುಕೊಂಡು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ವಿರೋಧ ಕಟ್ಟಿಕೊಳ್ಳಲೂ ಇಷ್ಟವಿಲ್ಲ. ಹಾಗಾಗಿ, ಅಸಮಾಧಾನ ಒಳಗೊಳಗೆ ಭುಗಿಲೇಳುತ್ತಲೇ ಇದೆ.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ಅಸಮಾಧಾನ :ಇದಕ್ಕಿಂತಲೂ ಮುಖ್ಯವಾಗಿ ಪಕ್ಷದಲ್ಲಿನ ಮುಸ್ಲಿಂ ನಾಯಕರು ಜೆಡಿಎಸ್ ಹೈಕಮಾಂಡ್ನೊಂದಿಗೆ ಮುನಿಸಿಕೊಂಡಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿಗೆ ಆ ನಾಯಕರು ಆಸಕ್ತಿ ತೋರುತ್ತಿಲ್ಲ. ಈ ಅಸಮಾಧಾನ ಶಮನಗೊಳಿಸುವುದು ಪಕ್ಷದ ನಾಯಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸಂಬಂಧ ಪಕ್ಷದ ಹಿರಿಯ ಮುಖಂಡರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾ ಪದಾಧಿಕಾರಿಗಳ ಮೂಲಕ ಪಕ್ಷದೊಳಗಿನ ಅಸಮಾಧಾನವನ್ನು ಶಮನ ಮಾಡುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಪೂರಕ ಎಂಬಂತೆ ಹಾಸನದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಅಕ್ತರ್ ಜೆಡಿಎಸ್ ಎಂದಿಗೂ ಮುಸ್ಲಿಂರನ್ನು ಕಡೆಗಣಿಸಿಲ್ಲ ಎಂದು ಹೇಳುವ ಮೂಲಕ ಅಸಮಾಧಾನವನ್ನು ಶಮನ ಮಾಡಲು ಮುಂದಾಗಿದ್ದಾರೆ.
ವಿಜಯಪುರ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ದಿಲಾವರ್ ಖಾಜಿ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಅಲ್ಪಸಂಖ್ಯಾತರ ಘಟಕದ ಸಹಮತವಿದೆ ಎಂದು ಸಮಜಾಯಿಶಿ ನೀಡಿದ್ದಾರೆ. ಆದರೆ ಕಲಬುರಗಿಯಲ್ಲಿ ಮುಸ್ಲಿಂ ಮುಖಂಡರು ಜೆಡಿಎಸ್ ವರಿಷ್ಠರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅದೇ ರೀತಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸಿ ಎಂ ಇಬ್ರಾಹಿಂ ಅ.16ರಂದು ಮೈತ್ರಿ ಬಗ್ಗೆ ಅಸಮಾಧಾನಗೊಂಡಿರುವ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಮುಖಂಡರು ಮತ್ತು ಮುಸ್ಲಿಂ ನಾಯಕರ ಸಭೆ ಆಯೋಜಿಸಿದ್ದಾರೆ. ಈ ಪ್ರತ್ಯೇಕ ಸಭೆಗೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಇಬ್ರಾಹಿಂ ಮನವೊಲಿಸುವ ಜವಾಬ್ದಾರಿಯನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತೆಗೆದುಕೊಂಡಿದ್ದಾರೆ. ಹಾಗಾಗಿ, ಯಾವ ತಂತ್ರ ಬಳಸಿ ಅಸಮಾಧಾನ ಶಮನಗೊಳಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.