ಬೆಂಗಳೂರು:ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಅಳವಡಿಸಿರುವ ಅಕ್ರಮ ಪಂಪ್ಸೆಟ್ಗಳಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಸೌಲಭ್ಯವನ್ನು ಎರಡು ದಿನಗಳೊಳಗಾಗಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಮಾನ್ವಿ ಮತ್ತು ರಾಯಚೂರು ತಾಲೂಕಿನ 2 ಲಕ್ಷ 40 ಸಾವಿರ ಎಕರೆಗೆ ನೀರಿನ ಕೊರತೆ ನೀಗಿಸಲು ತಕ್ಷಣ ರಾಯಚೂರು ಡಿಸಿ ಮತ್ತು ಎಸ್ ಪಿ ಹಾಗೂ ಕೊಪ್ಪಳ ಜಿಲ್ಲೆಯ ಡಿಸಿ ಮತ್ತು ಎಸ್ ಪಿ ಗಳಿಗೆ ನಿಗಾವಹಿಸುವಂತೆ ಸೂಚಿಸಿ ಎಂದು ರೈತರು ಸಿಎಂಗೆ ಮನವಿ ಮಾಡಿದ್ರು.
ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯೆಡಿಯೂರಪ್ಪ ಕೂಡಲೇ ನ್ಯಾಯಯುತವಾಗಿ ಯಾರಿಗೆ ನೀರು ಸಿಗಬೇಕೋ ಅವರಿಗೆ ಸಿಗುವಂತೆ ಮಾಡಬೇಕು ಅಂತಾ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಅಷ್ಟೇ ಅಲ್ಲದೆ, ಅಕ್ರಮ ಪಂಪ್ಸೆಟ್ಗಳಿಗೆ ಅಳವಡಿಸಿರುವ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಬೇಕು. ಇದಕ್ಕಾಗಿ ಅಗತ್ಯವಿದ್ದರೆ ಪೊಲೀಸರ ಭದ್ರತೆ ಪಡೆಯಿರಿ. ರೈತರಿಗೆ ನ್ಯಾಯಯುತವಾಗಿ ನೀರು ಹರಿಸುವತ್ತ ಕೂಡಲೇ ಗಮನ ಹರಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು.
ಇನ್ನು ಎರಡು ದಿನಗಳ ಒಳಗೆ ಎಲ್ಲಾ ಅಕ್ರಮ ಪಂಪ್ಸೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿ ಕೂಡಲೇ ರಾಯಚೂರು ಜಿಲ್ಲೆಗೆ ನೀರು ಹರಿಸಬೇಕು ಮತ್ತು ಸೂಕ್ತ ಕ್ರಮ ತೆಗೆದುಕೊಂಡು ಅದರ ವರದಿ ನೀಡಿ ಎಂದು ಸಿಎಂ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಆದೇಶಿಸಿದರು.