ಉಚಿತ ಹಾಲು ವಿತರಣೆಯಲ್ಲಿ ನಿರ್ಲಕ್ಷ್ಯ ಕಂಡು ಬಂದರೆ ಶಿಸ್ತು ಕ್ರಮ: ಸಚಿವ ಪ್ರಭು ಚವ್ಹಾಣ್
ಸದ್ಯ ರಾಜ್ಯದಲ್ಲಿ ಬಡಜನರಿಗೆ ನಿತ್ಯ 7.75 ಲಕ್ಷ ಲೀಟರ್ ಉಚಿತ ಹಾಲು ನೀಡಲಾಗುತ್ತಿದೆ. ಅರ್ಧ ಲೀಟರ್ ಪ್ಯಾಕ್ನಲ್ಲಿ ಹಾಲು ನೀಡಲಾಗುತ್ತಿದ್ದು, ಈ ತಿಂಗಳ ಅಂತ್ಯದವರೆಗೆ ಒಟ್ಟು 25.81 ಕೋಟಿ ರೂ. ವೆಚ್ಚವಾಗಲಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ.
ಬೆಂಗಳೂರು: ಬಡಜನರಿಗೆ ತಲುಪಬೇಕಾದ ಉಚಿತ ಹಾಲಿನ ವಿತರಣೆಯಲ್ಲಿ ಯಾವುದೇ ನಿರ್ಲಕ್ಷ್ಯ ಕಂಡು ಬಂದಲ್ಲಿ ಮುಲಾಜಿಲ್ಲದೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಎಚ್ಚರಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೆಎಂಎಫ್ನಿಂದ ರಾಜ್ಯದಲ್ಲಿ ವಾಸಿಸುತ್ತಿರುವ ಕೊಳಚೆ ಪ್ರದೇಶದ ಜನರಿಗೆ, ಅಲೆಮಾರಿಗಳಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ನಿತ್ಯ ಉಚಿತವಾಗಿ ಹಾಲು ವಿತರಣೆಯಾಗುತ್ತಿದ್ದು, ಸದ್ಯ ಈ ತಿಂಗಳ ಅಂತ್ಯದವರೆಗೂ ಇದನ್ನು ವಿಸ್ತರಣೆ ಮಾಡಬೇಕು ಎಂದು ಸಿಎಂ ಒಪ್ಪಿಗೆ ನೀಡಿದ್ದಾರೆ. ಹಾಲು ವಿತರಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಒಂದು ವೇಳೆ ನಿರ್ಲಕ್ಷ್ಯ ಕಂಡು ಬಂದಲ್ಲಿ ಅಂತವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಹಾಲು ಸರಿಯಾಗಿ ವಿತರಣೆ ಆಗದಿರುವ ಬಗ್ಗೆ ಸಾಕಷ್ಟು ದೂರು ಬಂದ ಹಿನ್ನೆಲೆ ಪಶುಪಾಲನಾ, ಪಶುವೈದ್ಯ ಸೇವಾ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಮಿತಿ ರಚಿಸಿ ಮಹಾನಗರ ಪಾಲಿಕೆ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಲಿನ ವಿತರಣೆ ಮಾಡಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಬಡಜನರಿಗೆ ನಿತ್ಯ 7.75 ಲಕ್ಷ ಲೀಟರ್ ಉಚಿತ ಹಾಲು ನೀಡಲಾಗುತ್ತಿದೆ. ಅರ್ಧ ಲೀಟರ್ ಪ್ಯಾಕ್ನಲ್ಲಿ ಹಾಲು ನೀಡಲಾಗುತ್ತಿದ್ದು, ಈ ತಿಂಗಳ ಅಂತ್ಯದವರೆಗೆ ಒಟ್ಟು 25.81 ಕೋಟಿ ರೂ. ವೆಚ್ಚವಾಗಲಿದೆ ಎಂದು ವಿವರಿಸಿದ್ದಾರೆ.