ಬೆಂಗಳೂರು: ಇದೊಂದು ಸಾಲದ ಸುಳಿಗೆ ಸಿಲುಕಿರುವ ಬಜೆಟ್. ಕೆಟ್ಟ ಆರ್ಥಿಕ ನೀತಿಯಿಂದ ಕೂಡಿದೆ. ಇವರ ಕೆಟ್ಟ ಆರ್ಥಿಕ ನೀತಿಯಿಂದ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿ ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಅತ್ಯಂತ ನಿರಾಶಾದಾಯಕ ಚುನಾವಣಾ ಬಜೆಟ್ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಜೆಟ್ ಟೀಕಿಸಿದ್ದಾರೆ.
ಬಜೆಟ್ ಕಲಾಪದಲ್ಲಿ ಭಾಗವಹಿಸಿದಂತೆ ಕಿವಿ ಮೇಲೆ ಹೂ ಇಟ್ಟುಕೊಂಡೇ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸಿದ್ದಾರೆ. 2023-24ರ ಮುಂಗಡಪತ್ರ ಮಂಡಿಸಿದ್ದಾರೆ. ಇದು ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್. ನಾನು ಕೊನೆಯ ಬಜೆಟ್ ಮಂಡಿಸಿದಾಗ 5 ವರ್ಷದಲ್ಲಿ ಏನು ಮಾಡಿದ್ದೆ? ಮುಂದೆನೂ ಮಾಡುತ್ತೇನೆ ಎಂಬುದನ್ನು ಹೇಳಿದ್ದೆ. ಆದರೆ ಇವರು ಹಾಗೆ ಮಾಡಿಲ್ಲ. 200 ಹೊಸ ಕಾರ್ಯಕ್ರಮ ಘೋಷಿಸಿದ್ದಾರೆ. ಬಹಳ ಅಂದರೆ 10 ದಿನಗಳಷ್ಟೇ ಬಾಕಿ ಇರೋದು. ಆಡದೇ ಮಾಡುವವನು ರೂಡಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ತಾನಾಡಿಯೂ ಮಾಡದವನು ಅಧಮನು ಇದು ಸರ್ವಜ್ಞನ ವಚನ. ಈ ಸರ್ಕಾರಕ್ಕೆ ಇದು ಸರಿಯಾಗಿ ಅನ್ವಯವಾಗುತ್ತದೆ ಎಂದು ಟೀಕಿಸಿದರು.
ಇವರ ಸಾಧನೆ ಏನೇನೂ ಇಲ್ಲ. ನಾವು ಎಸ್ಸಿ,ಎಸ್ಟಿಗೆ ಎಸ್ಸಿಪಿ, ಟಿಎಸ್ಪಿ ತಂದಿದ್ದೆವು. 36 ಸಾವಿರ ಕೋಟಿ ಅದಕ್ಕೆ ಮೀಸಲಿಟ್ಟಿದ್ದೆವು. ಇವರ ಬಜೆಟ್ ಗಾತ್ರ 3 ಲಕ್ಷ ಕೋಟಿ ಬಜೆಟ್ ಇದೆ. ಈಗಲೂ 30 ಸಾವಿರ ಕೋಟಿ ಎಸ್ಸಿಪಿ, ಟಿಎಸ್ಪಿ ಯೋಜನೆಗೆ ಕೊಟ್ಟಿಲ್ಲ. ಐವತ್ತು ಸಾವಿರ ಕೋಟಿ ಎಸ್ಸಿಪಿಟಿಎಸ್ಪಿಗೆ ಹಣ ಮೀಸಲಿಡಬೇಕಿತ್ತು. ಎಸ್ಸಿ ಎಸ್ಟಿಗೆ ಮಾಡಿದ ದೊಡ್ಡ ದ್ರೋಹ ಇದು. ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್. ಕಳೆದ ಬಾರಿ ಬಜೆಟ್ನಲ್ಲಿ ಘೋಷಣೆ 600 ಭರವಸೆ ಕೊಟ್ಟಿದ್ದರು. 90 ರಷ್ಟು ಭರವಸೆ ಈಡೇರಿಸಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸಾಲಗಾರರರಾದ ಜನರು: ಒಟ್ಟು ಸಾಲ 5,64,896 ಕೋಟಿ ಅಂತ ಹೇಳಿದ್ದಾರೆ. ನಾನು ಇದ್ದಾಗ 2,42,000 ಕೋಟಿ ಇತ್ತು. ಸಮ್ಮಿಶ್ರ ಸರ್ಕಾರ 41 ಸಾವಿರ ಕೋಟಿ ಸಾಲ ಮಾಡಿದ್ದರು. ಬಿಜೆಪಿ ಸರ್ಕಾರದಲ್ಲಿ 2,54,000 ಕೋಟಿ ಮಾಡಿದ್ದಾರೆ. ನಾವು ಐದು ವರ್ಷದಲ್ಲಿ ಒಂದು ಲಕ್ಷ ಕೋಟಿ ಸಾಲ ಮಾಡಿದ್ದೆವು. ಅತಿ ಹೆಚ್ಚು ಸಾಲ ಬಿಜೆಪಿ ಸರ್ಕಾರ ಮಾಡಿದೆ. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. 34 ಸಾವಿರ ಕೋಟಿ ಸಾಲದ ಬಡ್ಡಿ ಕೊಡಬೇಕು.ಯದ್ವಾ ತದ್ವಾ ಸಾಲ ಮಾಡಿ, ಜನರನ್ನು ಸಾಲಗಾರರನ್ನಾಗಿ ಮಾಡಿದ್ದಾರೆ ಎಂದು ಹೆಚ್ಚು ಸಾಲದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮುಂದಿನ ವರ್ಷ 77 ಸಾವಿರ ಕೋಟಿ ಸಾಲ ಮಾಡುತ್ತೇವೆ ಅಂತ ಹೇಳಿದ್ದಾರೆ. ಸಾಲದ ಪ್ರಮಾಣ ಶೇ. 95 ಜಾಸ್ತಿಯಾಗಿದೆ. ಸಾಲ, ಅಭಿವೃದ್ಧಿ ಬೆಳವಣಿಗೆ ಪ್ರಮಾಣಕ್ಕೆ ಹೊಡೆತ ಕೊಟ್ಟಿದೆ. ಹೀಗಾದರೆ ಅಭಿವೃದ್ಧಿ ಬೆಳವಣಿಗೆ ಇನ್ನೆಲ್ಲಿ ಸಾಧ್ಯವಾಗುತ್ತದೆ. ಮಕ್ಕಳು ಸಾಕೋ ಜವಾಬ್ದಾರಿ ಇಲ್ಲದೆ ಹೋದರೆ ಎಷ್ಟು ಮಕ್ಕಳನ್ನಾದರೂ ಹೆರಬಹುದು ಅನ್ನುವಂತಾಗಿದೆ ಇವರ ಬಜೆಟ್. ಅನುಷ್ಠಾನ ಮಾಡುವ ಜವಾಬ್ದಾರಿ ಇಲ್ಲ. ಹಾಗಾಗಿ ಎಷ್ಟು ಭರವಸೆ ಬೇಕಾದರೂ ಕೊಡಬಹುದು. ಚುನಾಯಿತ ಸರ್ಕಾರ ಪಾರದರ್ಶಕವಾಗಿರಬೇಕು. ಜನರಿಗೆ ಉತ್ತರದಾಯಿಕವಾಗಿರಬೇಕು. ಮತದಾರರಿಂದ ಯಾವುದನ್ನೂ ಮುಚ್ಚಿಡಬಾರದು ಎಂದು ಟೀಕಿಸಿದರು.