ಬೆಂಗಳೂರು: ಒಗ್ಗಟ್ಟಿನಿಂದ ಕೆಲಸ ಮಾಡುವ ಸಮಯದಲ್ಲಿ ಕೈ ಬಿಟ್ಟು ಹೋದರೆ, ಅವರ ಬದ್ಧತೆಯ ಮೇಲೆ ಪ್ರಶ್ನೆ ಮೂಡುತ್ತದೆ ಹಾಗೂ ಪರೋಕ್ಷವಾಗಿ ಕೋಮುವಾದಿ ಶಕ್ತಿಗಳಿಗೆ ಸಹಕರಿಸಿದಂತಾಗುತ್ತದೆ ಎಂದು ರಾಜ್ಯಸಭೆಯ ಪತ್ರಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗುಲಾಬ್ ನಬಿ ಅಜಾದ್ ರಾಜೀನಾಮೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಗುಲಾಬ್ ನಬಿ ಅಜಾದ್ ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ನೋಡಿ ಬೇಸರವಾಗಿದೆ. ಅವರೇ ಉಲ್ಲೇಖಿಸಿರುವಂತೆ ಕಳೆದ 5 ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ಅವರು ಕೆಲಸ ಮಾಡಿದ್ದಾರೆ. ಹಾಗೆಯೇ ಪಕ್ಷವೂ ಕೂಡ ಅವರ ನಿರೀಕ್ಷೆಗೂ ಮೀರಿ ಅವಕಾಶಗಳನ್ನು ಒದಗಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಎಐಸಿಸಿಯಲ್ಲಿ ದುಷ್ಟರ ಕೂಟ, ರಿಮೋಟ್ ಕಂಟ್ರೋಲ್ ಆಡಳಿತ: ಗುಲಾಂ ನಬಿ ಆಜಾದ್
ಜನರ ಸೇವೆ ಮಾಡಲು ಕಾಂಗ್ರೆಸ್ ಪಕ್ಷ ಒದಗಿಸಿದ ಅವಕಾಶ ಬಳಸಿ ಅವರೂ ಸಮಾಜ ಹಾಗೂ ದೇಶಕ್ಕಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಪಕ್ಷವನ್ನು ತೊರೆಯುವ ಅವರ ನಿರ್ಧಾರಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಪ್ರಸ್ತುತ ವಾತಾವರಣದಲ್ಲಿ ದೇಶದಲ್ಲಿ ಅಧಿಕಾರದಲ್ಲಿರುವ ಕೋಮುವಾದಿ ಆಡಳಿತವು ಸತತವಾಗಿ ಸಂವಿಧಾನದ ಆಶಯಗಳು, ಅಲ್ಪಸಂಖ್ಯಾತರ ಮೇಲೆ ಹಾಗೂ ದೀನ ದಲಿತರ ಮೇಲೆ ಹಲ್ಲೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಇಡೀ ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ.
ಇದರ ವಿರುದ್ಧ ದೇಶವನ್ನು ಒಗ್ಗೂಡಿಸುವ ಸಲುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ದೇಶ ಹಿಂದೆಂದೂ ನೋಡಿರದಂತಹ 3,500 ಕಿ.ಮೀ. ಪಾದಯಾತ್ರೆಯನ್ನು ಆಯೋಜಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಕ್ಷವನ್ನು ತೊರೆದು ಹೋಗುವುದು ಕೋಮುವಾದಿಗಳ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಿದಂತೆ ಹಾಗೂ ಸಂವಿಧಾನಪರ ಹೋರಾಟವನ್ನು ದುರ್ಬಲಗೊಳಿಸಿದಂತೆ. ಇದನ್ನು ಅವರಿಂದ ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗುಲಾಂ ನಬಿ ಆಜಾದ್ 'Modified' ಎಂದ ಜೈರಾಂ ರಮೇಶ್: ಏನೀ ಮಾತಿನ ಅರ್ಥ?