ಕರ್ನಾಟಕ

karnataka

ETV Bharat / state

ಆನ್​ಲೈನ್ ಶಿಕ್ಷಣದಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ: ತಜ್ಞರ ವರದಿ ಪಾಲನೆಗೆ ಬದ್ಧವೆಂದ ಸುರೇಶ್ ಕುಮಾರ್

ಮಕ್ಕಳ ಕಣ್ಣಿಗೆ ಆಗಾಗ ವಿಶ್ರಾಂತಿ ನೀಡಿ ಮಕ್ಕಳ ದೃಷ್ಟಿಯ ಮೇಲೆ ದುಷ್ಪರಿಣಾಮ ಆಗದ ರೀತಿಯಲ್ಲಿನ ವರದಿಯಂತೆ ಶಿಕ್ಷಣ ನೀಡಲು ಸರ್ಕಾರ ಆದೇಶ ನೀಡಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್​ ಸುರೇಶ್​ಕುಮಾರ್ ಸದನಕ್ಕೆ ತಿಳಿಸಿದರು.

ಸುರೇಶ್ ಕುಮಾರ್
ಸುರೇಶ್ ಕುಮಾರ್

By

Published : Mar 22, 2021, 5:19 PM IST

ಬೆಂಗಳೂರು:ಆನ್​ಲೈನ್ ಶಿಕ್ಷಣದಿಂದ ಮಕ್ಕಳ ಕಣ್ಣುಗಳ ಮೇಲಾಗುವ ದುಷ್ಪರಿಣಾಮ ತಡೆಗೆ ಮಾರ್ಗಸೂಚಿಯಂತೆ ಶಿಕ್ಷಣ ವ್ಯವಸ್ಥೆ ಪಾಲನೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ವಿಧಾನ ಪರಿಷತ್​ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಯು.ಬಿ. ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊರೊನಾ ಆರಂಭದ ನಂತರ ಆನ್​ಲೈನ್ ಶಿಕ್ಷಣ ದೊಡ್ಡ ಚರ್ಚೆಯಲ್ಲಿರುವ ಸುದ್ದಿಯಾಗಿದೆ. ಕಳೆದ ಜೂನ್​ನಿಂದ ಆನ್​ಲೈನ್ ಶಿಕ್ಷಣ ಆರಂಭವಾಗಿದೆ. ಎಲ್​ಕೆಜಿ, ಯುಕೆಜಿ ಮಕ್ಕಳಿಗೂ ಆನ್​ಲೈನ್ ಶಿಕ್ಷಣ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಆದ್ದರಿಂದ ಎಲ್​ಕೆಜಿಯಿಂದ 5ನೇ ತರಗತಿವರೆಗೂ ಆನ್​ಲೈನ್ ಶಿಕ್ಷಣ ಬೇಡ ಎನ್ನುವ ಆದೇಶವನ್ನು ಮಾಡಿದ್ದೇವೆ. ಆದರೆ, ನ್ಯಾಯಾಲಯ ನಮ್ಮ ಆದೇಶಕ್ಕೆ ತಡೆ ನೀಡಿತು, ಆನ್​ಲೈನ್ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಆದೇಶ ನೀಡಿತು. ಹಾಗಾಗಿ ಅನಿವಾರ್ಯವಾಗಿ ಆಟವಾಡಿಕೊಂಡಿರಬೇಕಾದ ಎಲ್​ಕೆಜಿ, ಯುಕೆಜಿ ಮಕ್ಕಳಿಗೂ ಆನ್​ಲೈನ್ ಶಿಕ್ಷಣ ನೀಡಲಾಗುತ್ತಿದೆ ಎಂದು ವಿವರಿಸಿದರು.

ಶಿಕ್ಷಣ ಇಲಾಖೆ ಯಾವ ತರಗತಿ ಮಕ್ಕಳಿಗೆ ಎಷ್ಟು ಪ್ರಮಾಣ ಆನ್​ಲೈನ್ ಶಿಕ್ಷಣ ನೀಡಬೇಕು, ಎಷ್ಟು ಸಮಯದ ಬಿಡುವು ಇರಬೇಕು ಎನ್ನುವುದು ಸೇರಿದಂತೆ ಪ್ರೊ.ಶ್ರೀಧರ್ ಮತ್ತು ನಿಮ್ಹಾನ್ಸ್ ತಜ್ಞರಿಂದ‌ ಸಮಗ್ರ ವರದಿ ಪಡೆದು ನಿಯಮಾವಳಿ ರೂಪಿಸಲಾಗಿದೆ. ಮಕ್ಕಳ ಕಣ್ಣಿಗೆ ಆಗಾಗ್ಗೆ ವಿಶ್ರಾಂತಿ ನೀಡಿ ಮಕ್ಕಳ ದೃಷ್ಟಿಯ ಮೇಲೆ ದುಷ್ಪರಿಣಾಮ ಆಗದ ರೀತಿಯಲ್ಲಿನ ವರದಿಯಂತೆ ಶಿಕ್ಷಣ ನೀಡಲು ಸರ್ಕಾರ ಆದೇಶ ನೀಡಿದ್ದು, ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಇಲಾಖೆ ಬದ್ಧವಾಗಿದೆ ಎಂದು ತಿಳಿಸಿದರು.

ಆದಷ್ಟು ಬೇಗ ತಿಮ್ಮಯ್ಯ ಸ್ಮಾರಕ ಪೂರ್ಣ:

ಜನರಲ್ ತಿಮ್ಮಯ್ಯ ಸ್ಮಾರಕದ ಭದ್ರತಾ ಸಿಬ್ಬಂದಿ ಹುದ್ದೆಗೆ ನೇಮಕಗೊಳಿಸಲಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಪರವಾಗಿ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ತಿಮ್ಮಯ್ಯ ಸ್ಮಾರಕ ನಮಗೆಲ್ಲ ಪ್ರೇರಣೆಯಾಗಿದೆ. 2 ಕೋಟಿ ರೂ. ಅನುದಾನವನ್ನು ಆದಷ್ಟು ಬೇಗ ಮಂಜೂರು ಮಾಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದರು.

ಸ್ಮಾರಕದ ಭದ್ರತೆಗೆ ನಿವೃತ್ತ ಸೈನಿಕರನ್ನ ನೇಮಿಸುವಂತೆ ಸದಸ್ಯರು ಮನವಿ ಮಾಡಿದ್ದಾರೆ. ಇದಕ್ಕೆ ನನ್ನ ಸಹಮತವೂ ಇದೆ, ನಿವೃತ್ತ ಸೈನಿಕರಿಗೆ ಆ ಜವಾಬ್ದಾರಿ ವಹಿಸಲಾಗುತ್ತದೆ. ಮಕ್ಕಳಿಗೆ‌ ಉಚಿತ‌ ಪ್ರವೇಶ ನೀಡುವ ಬೇಡಿಕೆ ಇಟ್ಟಿದ್ದಾರೆ, ಸೈನ್ಯದ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಪ್ರೇರಣೆ ಮೂಡಿಸುವ ಅಗತ್ಯವಿದೆ. ಹಾಗಾಗಿ ಈ ಬೇಡಿಕೆಗೂ ನನ್ನ ಸಹಮತ‌ವಿದ್ದು, ಈ ಎರಡನ್ನು ಸರ್ಕಾರ ಈಡೇರಿಸಲಿದೆ‌ ಎಂದು ತಿಳಿಸಿದರು.

ಅರಣ್ಯ ಇಲಾಖೆ ಅನುಮತಿ ಇಲ್ಲದೆ ನೀಲಗಿರಿ ಕಟಾವು?

ರಾಜ್ಯದಲ್ಲಿ ಅಕೇಶಿಯಾ ಮತ್ತು ನೀಲಗಿರಿ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೇ ಕಟಾವು ಮಾಡಲು ಅವಕಾಶ ಕಲ್ಪಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಕೆ.ಸಿ. ಕೊಂಡಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವ ಶೆಟ್ಟರ್, 2012 ರಲ್ಲಿ ರಾಜ್ಯದಲ್ಲಿ ಅಕೇಶಿಯಾ, ನೀಲಗಿರಿಯನ್ನು ನಿಷೇಧಿಸಲಾಗಿದೆ. 2017 ರಲ್ಲೇ ಎರಡನೇ ಬಾರಿಗೆ ಸರ್ಕಾರಿ ಆದೇಶ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್​ಗೆ ಹೋಗಿದ್ದರು. ನಮ್ಮ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ, ಅದನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ ಎಂದರು.

ಅರಣ್ಯ ಇಲಾಖೆ ಅಕೇಶಿಯಾ, ನೀಲಗಿರಿ ಗಿಡಗಳನ್ನು ನೆಡುತ್ತಿಲ್ಲ, ಎಂಪಿಎಂ ಕಾಗದ ಕಾರ್ಖಾನೆಗಾಗಿ ರಿನೀವಲ್ ಮಾಡಬೇಕಿತ್ತು, ತಾಂತ್ರಿಕವಾಗಿ ನವೀಕರಿಸಿ ಕೊಡಲಾಗಿದೆ. ಹಳೆಯ ಪರವಾನಗಿ ನವೀಕರಣ ಮಾಡಿದ್ದೇವೆಯೇ ಹೊರತು ಹೊಸದಾಗಿ ಯಾರಿಗೂ ಕೊಟ್ಟಿಲ್ಲ ಎಂದು ತಿಳಿಸಿದರು.

ಶಿಕ್ಷಕರ ನೇಮಕಾತಿ ವೇಳೆ ಗಡಿ ಜಿಲ್ಲೆಗೆ ಆದ್ಯತೆ:

ಶಿಕ್ಷಕರ ನೇಮಕಾತಿ ವೇಳೆ ಗಡಿಭಾಗದ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಚಿದಾನಂದ ಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 19 ಗಡಿ ಜಿಲ್ಲೆಯ 52 ಗಡಿ ತಾಲೂಕುಗಳಲ್ಲಿ 13,211 ಪ್ರಾಥಮಿಕ ಶಾಲೆ, 1,384 ಪ್ರೌಢಶಾಲೆ ಸೇರಿ ಒಟ್ಟು 14,595 ಶಾಲೆಗಳಿವೆ. ಆದರೆ ಇದರಲ್ಲಿ ಶೇ.50 ರಷ್ಟು ಹುದ್ದೆ ಖಾಲಿ ಇವೆ ಎನ್ನುವುದು ಸತ್ಯಕ್ಕೆ ದೂರ, ಆದರೆ ಶಿಕ್ಷಕರ‌ ಕೊರತೆ ಇದೆ. ಗಡಿ ಭಾಗಕ್ಕೆ‌ ಹೋಗಲು ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಮುಂದಿನ ನೇಮಕಾತಿ ವೇಳೆ ಗಡಿ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ..ಸರ್ಕಾರ ಬೀಳಿಸೋದಕ್ಕೆ ಸಿ.ಪಿ ಯೋಗೇಶ್ವರ್ 9ಕೋಟಿ ಸಾಲ ಮಾಡಿದ್ಯಾಕೆ?: ಸಿದ್ಧರಾಮಯ್ಯ ಪ್ರಶ್ನೆ

ABOUT THE AUTHOR

...view details