ದೇವನಹಳ್ಳಿ : ರನ್ ವೇಯಲ್ಲಿ ಅವಘಡ ಸಂಭವಿಸಿದಾಗ ಮತ್ತು ನಿಷ್ಕ್ರೀಯಗೊಂಡ ವಿಮಾನಗಳಿಂದ ವಿಮಾನಗಳ ಹಾರಾಟದಲ್ಲಿ ವಿಳಂಬವಾಗುತ್ತೆ. ರನ್ ವೇಯಿಂದ ನಿಷ್ಕ್ರೀಯಗೊಂಡ ವಿಮಾನಗಳನ್ನ ಕ್ಷಿಪ್ರವಾಗಿ ತೆರವುಗೊಳಿಸುವ ಅತ್ಯಾಧುನಿಕ ಉಪಕರಣವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಡೆದಿದೆ.
ಈ ಉಪಕರಣ ಪಡೆದ ದೇಶದ ಮತ್ತು ದಕ್ಷಿಣ ಏಷ್ಯಾದ ಮೊಟ್ಟಮೊದಲ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ಕುಂಜ್ ಜಿಎಂಬಿಎಚ್ ಉತ್ಪಾದಿಸಿದ ಅತ್ಯಾಧುನಿಕ ರಿಕವರಿ ಕಿಟ್ ಅನ್ನು ಬಿಐಎಎಲ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮರಾರ್ ವರ್ಚುವಲ್ ಮೂಲಕ ಉದ್ಘಾಟಿಸಿದರು.
ರನ್‍ವೇನಲ್ಲಿ ನಿಷ್ಕ್ರಿಯವಾಗಿ ನಿಂತಿರುವ ವಿಮಾನದಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಗಳಿಗೆ ಅಡ್ಡಿಯಾಗುವ ಸಂಭವವಿರುತ್ತದೆ. ಇದರಿಂದ ವಿಮಾನ ಹಾರಾಟ ವಿಳಂಬ, ವಿಮಾನಗಳನ್ನು ಬೇರೆಡೆಗೆ ಕಳುಹಿಸುವುದು ಮತ್ತು ವಿಮಾನಯಾನ ಸಂಸ್ಥೆ ಹಾಗೂ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುವವರಿಬ್ಬರಿಗೂ ಆದಾಯದ ನಷ್ಟಕ್ಕೆ ದಾರಿಯಾಗಲಿದೆ.
ನಿಷ್ಕ್ರೀಯ ವಿಮಾನಗಳನ್ನ ಕ್ಷಿಪ್ರವಾಗಿ ತೆರವುಗೊಳಿಸುವ ಈ ಅತ್ಯಾಧುನಿಕ ಕಿಟ್ ಅನ್ನು ಬೇಕಾದ ಕಡೆಗೆ ಸಾಗಿಸಬಹುದು. ಜಗತ್ತಿನ ದೊಡ್ಡ ಪ್ರಯಾಣಿಕರ ವಿಮಾನವಾದ ಏರ್‍ಬಸ್ ಎ380 ಯನ್ನು ತೆರವುಗೊಳಿಸುವ ಸಾಮರ್ಥ್ಯವನ್ನು ಈ ಕಿಟ್ ಹೊಂದಿದೆ. ಜೊತೆಗೆ ರನ್‍ವೇನಲ್ಲಿ ಯಾವುದೇ ರೀತಿಯ ವಿಮಾನಗಳ ಅವಘಡದ ಸಂದರ್ಭದಲ್ಲಿ ಇದು ನೆರವಾಗುತ್ತದೆ. ಇದರಿಂದ ರನ್ ವೇ ಮುಚ್ಚುವ ಸಾಧ್ಯತೆಯನ್ನು ಈ ಕಿಟ್ ಕಡಿಮೆ ಮಾಡುತ್ತದೆ.
ನಿಷ್ಕ್ರಿಯಗೊಂಡ ಎಲ್ಲಾ ರೀತಿಯ ವಿಮಾನಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ತೆರವುಗೊಳಿಸುವುದರಿಂದ ಸುಗುಮವಾಗಿ ವಿಮಾನಗಳ ಹಾರಾಟ ನಡೆಯುತ್ತೆ. ಈ ಅತ್ಯಾಧುನಿಕ ಕಿಟ್ ಅನ್ನು ಬೆಂಗಳೂರು ವಿಮಾನ ನಿಲ್ದಾಣದ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾಗಿದೆ. ಇದರಲ್ಲಿ ಗ್ರೌಂಡ್ ಪ್ರಿಪರೇಷನ್ ಟೂಲ್ಸ್, ವಿಮಾನವನ್ನು ಎತ್ತುವುದು, ಡಿ-ಬಾಗಿಂಗ್, ಥಿದರಿಂಗ್, ಎಳೆದೊಯ್ಯುವುದು ಮತ್ತು ವಿಮಾನಗಳ ವಿಷಯದಲ್ಲಿ ಎಲ್ಲಾ ರೀತಿಯ ಕಾರ್ಯಗಳನ್ನು ಮಾಡುತ್ತೆ.
ಕುಂಜ್ ಜಿಎಂಬಿಎಚ್‍ನ ವ್ಯವಸ್ಥಾಪಕ ನಿರ್ದೇಶಕ ಆ್ಯಂಡ್ರಿಯಾಸ್ ಫ್ಯೂಜ್, ಮಿಲೇನಿಯಂ ಏರೋ ಡೈನಾಮಿಕ್ಸ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಚೇರ್ಮನ್ ಮಿಲಾನ್ ಆರ್ ಜಟಾಕಿಯಾ ಕಾರ್ಯಕ್ರಮದಲ್ಲಿ ಹಾಜರಿದ್ದರು.