ಬೆಂಗಳೂರು :ಕರ್ತವ್ಯದ ಮೇಲೆ ಯಾವುದೇ ಸಿಬ್ಬಂದಿಯನ್ನು ವಿದೇಶಕ್ಕೆ ಕಳುಹಿಸದಂತೆ ರಾಜ್ಯದ ಎಲ್ಲಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾರ್ಚ್ 1 ರಂದು ಅಮೆರಿಕಾದಿಂದ ಬಂದ ವ್ಯಕ್ತಿಯೊಬ್ಬರ ಕುಟುಂಬದವರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದೆ. ಕೊರೊನಾ ಅತಿಯಾಗಿರುವ ದೇಶದಿಂದ ಬಂದವರಿಗೆ ಈ ವೈರಸ್ ಬಂದಿದೆ. ಹಾಗಾಗಿ ಹೊರದೇಶಗಳಿಗೆ ಸಿಬ್ಬಂದಿಯನ್ನು ಕಳುಹಿಸುವಂತಿಲ್ಲ ಎಂದು ಐಟಿ ಕಂಪನಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದರು.
ಅಮೆರಿಕಾದಿಂದ ಬಂದ ವ್ಯಕ್ತಿ, ಹೆಂಡತಿ, ಮಗು ಜೊತೆಗೆ ಆತನ ಸಹೋದ್ಯೋಗಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ನೀಡುತ್ತಿದ್ದೇವೆ. ಕೊರೊನಾ ಸೋಂಕಿತ ನಾಲ್ವರ ಆರೋಗ್ಯ ಸ್ಥಿರವಾಗಿದೆ. ಆದಷ್ಟು ಬೇಗ ಅವರು ಚೇತರಿಕೆ ಕಾಣಲೆಂದು ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಸಚಿವರಾದ ಬಿ.ಶ್ರೀರಾಮುಲು ಹಾಗೂ ಡಾ. ಕೆ ಸುಧಾಕರ್.. ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ಮೈಸೂರು, ಹಾಸನ, ಶಿವಮೊಗ್ಗ ಬೆಂಗಳೂರಿನಲ್ಲಿ ಮತ್ತೆ ನಾಲ್ಕು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ಬಿದ್ದರೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು. ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಏರ್ಪೋರ್ಟ್ನಲ್ಲಿ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬಿಸಿಲು ಇರುವುದರಿಂದ ವೈರಸ್ ಹರಡುವ ಪ್ರಮಾಣ ಕಡಿಮೆಯಾಗಿದೆ. ವೈರಸ್ ಬಗ್ಗೆ ಹೆಚ್ಚು ಪ್ರಚಾರ ಕೊಡುವುದು ಬೇಡ, ಜನರು ಭಯಗೊಳ್ಳುತ್ತಾರೆ ಎಂದು ಮನವಿ ಮಾಡಿಕೊಂಡರು.