ಕರ್ನಾಟಕ

karnataka

ETV Bharat / state

ಭಗವಾನ್ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ವಯೋಸಹಜ ಕಾಯಿಲೆಯಿಂದ ಇಹ ಲೋಕ ತ್ಯಜಿಸಿದ ನಿರ್ದೇಶಕ ಎಸ್.ಕೆ ಭಗವಾನ್ ಅವರಿಗೆ ಸಿಎಂ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

Directed by SK Bhagwan
ನಿರ್ದೇಶಕ ಎಸ್.ಕೆ ಭಗವಾನ್

By

Published : Feb 20, 2023, 10:04 AM IST

ಬೆಂಗಳೂರು: ನಿರ್ದೇಶಕ ಎಸ್.ಕೆ ಭಗವಾನ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ಕೆ. ಭಗವಾನ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ಬೇಸರವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬವರ್ಗದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ದೊರೈ- ಭಗವಾನ್ ಜೋಡಿಯು ಕನ್ನಡ ಚಿತ್ರರಂಗಕ್ಕೆ ಅನೇಕ ಸದಭಿರುಚಿಯ ಚಿತ್ರಗಳನ್ನು ನೀಡಿದೆ. ಡಾ. ರಾಜ್‌ ಕುಮಾರ್ ನಟನೆಯ ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಹೊಸ ಬೆಳಕು’ ಸೇರಿದಂತೆ 55 ಚಿತ್ರಗಳನ್ನು ಸ್ನೇಹಿತ ದೊರೈ ರಾಜ್‌ ಜೊತೆ ಸೇರಿ ನಿರ್ದೇಶಿಸಿದ್ದರು. ಓಂ ಶಾಂತಿಃ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಎಸ್.ಕೆ.ಭಗವಾನ್ ಅವರ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ: ಕನ್ನಡ ಕಲಾ ಜಗತ್ತು ಮತ್ತು ಸಿನಿಮಾ ಪ್ರಪಂಚವನ್ನು ಬೆಳಗಿ ಬೆಳ್ಳೆತೆರೆಯನ್ನು ಶ್ರೀಮಂತಗೊಳಿಸಿದ್ದ ಕನ್ನಡದ ಹಿರಿಮೆಯೂ ಆಗಿದ್ದ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ (ಎಸ್.ಕೆ.ಭಗವಾನ್) ಅವರ ನಿಧನ ಅತ್ಯಂತ ಬೇಸರ ತರಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಹಿರಿಯ ನಿರ್ದೇಶಕರ ನಿಧನ ಹಿನ್ನೆಲೆ ಸಂತಾಪ ವ್ಯಕ್ತಪಡಿಸಿರುವ ಅವರು, ದೊರೈ ಭಗವಾನ್ ಎಂದೇ ಖ್ಯಾತರಾಗಿದ್ದ ಇವರು ಕನ್ನಡ ಸಿನಿಮಾವನ್ನು ಸಾಂಪ್ರದಾಯಿಕ ಶೈಲಿಯಿಂದ ಅಂತಾರಾಷ್ಟ್ರೀಯ ಮಟ್ಟದ ಶೈಲಿ ಮತ್ತು ತಂತ್ರಜ್ಞಾನಕ್ಕೆ ಅಳವಡಿಸಿದ ಮೊದಲಿಗರಲ್ಲಿ ಒಬ್ಬರು.

“ಜೇಡರ ಬಲೆ”, “ಗೋವಾದಲ್ಲಿ ಸಿಐಡಿ 999”, “ಆಪರೇಷನ್ ಜಾಕ್‌ಪಾಟ್” ರೀತಿಯ ಸಿನಿಮಾಗಳ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಕನ್ನಡ ಸಿನಿಮಾವನ್ನು ಅರ್ಧ ಶತಮಾನದ ಹಿಂದೆಯೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದವರು. ಇವರು ಇನ್ನಷ್ಟು ಕಾಲ ನಮ್ಮ ನಡುವೆ ಇರಬೇಕಿತ್ತು. ನನ್ನ ಆತ್ಮೀಯರೂ ಆಗಿದ್ದ ಇವರನ್ನು ನಾನಾ ಸಂದರ್ಭಗಳಲ್ಲಿ ಭೇಟಿಯಾಗುವ ಅವಕಾಶ ಹತ್ತಾರು ಬಾರಿ ಒದಗಿ ಬಂದಿತ್ತು. 90 ವರ್ಷ ವಯಸ್ಸಿನ ಇವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ಕನ್ನಡ ರಂಗಭೂಮಿ ಮೂಲಕ ಸಿನಿಮಾ ರಂಗ ಪ್ರವೇಶಿಸಿ ಬೆಳ್ಳಿ ಪರದೆಯನ್ನು ಶ್ರೀಮಂತಗೊಳಿಸಿದ ಭಗವಾನ್ ಅವರು ತಮ್ಮ 65 ವರ್ಷಗಳ ಸುದೀರ್ಘ ಸಿನಿಮಾ ಸಾಹಸಗಳಲ್ಲಿ 28ಕ್ಕೂ ಹೆಚ್ಚು ಕನ್ನಡ ಕಾದಂಬರಿಗಳನ್ನು ಬೆಳ್ಳಿ ಪರದೆಗೆ ತಂದ ಕೀರ್ತಿ ಹೊಂದಿದ್ದಾರೆ ಎಂದರು.

ಮುಂದೆ, ಭಗವಾನ್ ನಿರ್ದೇಶನದಲ್ಲಿ ಅರಳಿದ “ಕಸ್ತೂರಿ ನಿವಾಸ, ಸಂಧ್ಯಾರಾಗ, ಬಯಲುದಾರಿ, ಹೊಸ ಬೆಳಕು, ಬೆಂಕಿಯ ಬಲೆ.”, ಮುಂತಾದ ಹಲವು ಸಿನಿಮಾಗಳು ಈಗಲೂ ನನ್ನ ನೆನಪಿನಲ್ಲಿ ಉಳಿದಿವೆ. ಸಿನಿಮಾ ನಿರ್ದೇಶನಕ್ಕೆ ಪೂರ್ಣವಿರಾಮ ಹಾಕಿದ ಬಳಿಕ “ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್”ನ ಪ್ರಾಂಶುಪಾಲರಾಗಿ ಇವರು ತಮ್ಮ ತಿಳಿವಳಿಕೆ, ಜ್ಞಾನ ಮತ್ತು ಅನುಭವವನ್ನು ಹೊಸ ತಲೆಮಾರಿನ ಕಲಾಸಕ್ತರಿಗೂ ವರ್ಗಾಯಿಸುವ ಮೂಲಕ ಕನ್ನಡದ ಜ್ಞಾನವನ್ನು ಹೆಚ್ಚಿಸಿದ್ದಾರೆ. ಇವರ ಅಗಲಿಕೆ ಭಾರತೀಯ ಸಿನಿಮಾ ಜಗತ್ತಿಗೆ ತುಂಬಲಾರದ ನಷ್ಟ.

ಇವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕುಟುಂಬ ವರ್ಗದವರಿಗೆ, ಬಂಧು ಮಿತ್ರರಿಗೆ, ಅಭಿಮಾನಿಗಳಿಗೆ ಹಾಗೂ ಸಿನಿಮಾ ಜಗತ್ತಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮ ಕಲಾ ಶ್ರೀಮಂತಿಕೆಯ ಕಾರಣಕ್ಕೆ ಭಗವಾನ್ ಅವರು ಕನ್ನಡ ಭಾಷೆ ಇರುವವರೆಗೂ ಕನ್ನಡ ಮಣ್ಣಿನಲ್ಲಿ ಅಜರಾಮರವಾಗಿ ಉಳಿಯುತ್ತಾರೆ ಎಂದು ಹೇಳುತ್ತಾ ಹಿರಿಯ ಪ್ರತಿಭೆಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ ಎಂದು ಸಿದ್ದರಾಮಯ್ಯ ತಮ್ಮ ಸಂತಾಪ ಸಂದೇಶದಲ್ಲಿ ವಿವರಿಸಿದ್ದಾರೆ.

ಭಗವಾನ್ ನಿಧನ:ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ ಭಗವಾನ್ ಇಂದು ಬೆಳಗ್ಗೆ 6 ಗಂಟೆಗೆ ಇಹ ಲೋಕತ್ಯಜಿಸಿದ್ದಾರೆ. ಸಹಕಾರ ನಗರದ ಮಗಳ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಜೇಡರ ಬಲೆ,ಕಸ್ತೂರಿ ನಿವಾಸ, ಎರಡು ಕನಸಯ, ಬಯಲು ದಾರಿ, ಆಪರೇಷನ್ ಡೈಮಂಡ್ ರಾಕೆಟ್ , ಗಿರಿಕನ್ಯೆ, ಚಂದನದ ಗೊಂಬೆ, ಮುನಿಯನ ಮಾದರಿ , ಹೊಸಬೆಳಕು ,ಬೆಂಕಿಯ ಬಲೆ,ಯಾರಿವನು ,ನೀನು ನಕ್ಕರೆ ಹಾಲು ಸಕ್ಕರೆ ,ಜೀವನ ಚೈತ್ರ, ಒಡಹುಟ್ಟಿದವರು ಹೀಗೆ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು. ಡಾ.ರಾಜ್ ಕುಮಾರ್ ಗೆ ಅತಿ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಭಗವಾನ್ ಅಗಲಿಕೆ ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಉಂಟು ಮಾಡಿದೆ.

ಇದನ್ನೂ ಓದಿ;ಡಾ. ರಾಜ್​ಕುಮಾರ್​ಗೆ ಅತಿ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದ ಭಗವಾನ್​ ಇನ್ನಿಲ್ಲ

ABOUT THE AUTHOR

...view details