ಬೆಂಗಳೂರು: ಮೈಸೂರಿನಲ್ಲಿ ಪ್ರಭಾವಿಗಳು, ಉದ್ಯಮಿಗಳು ಮತ್ತು ಸೆಲೆಬ್ರೆಟಿಗಳು ಜನ ಸಾಮಾನ್ಯರ ಮೇಲೆ ದೌರ್ಜನ್ಯ ನಡೆಸುತ್ತಿರುವಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಹೋಟೆಲ್ನಲ್ಲಿ ವೇಟರ್ ಮೇಲೆ ಸ್ಟಾರ್ ನಟನಿಂದ ಹಲ್ಲೆ: ಕ್ರಮಕ್ಕಾಗಿ ಗೃಹ ಸಚಿವರಿಗೆ ಇಂದ್ರಜಿತ್ ಲಂಕೇಶ್ ಪತ್ರ - ಸಿನಿ ನ್ಯೂಸ್
ಗೃಹ ಸಚಿವರಿಗೆ ಪತ್ರ ಬರೆದಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಪ್ರಭಾವಿಗಳು, ಸೆಲೆಬ್ರೆಟಿಗಳು ಜನ ಸಾಮಾನ್ಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಪೊಲೀಸರು ಇದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ನಗರದ ಸಂದೇಶ್ ನಾಗರಾಜ್ ಎಂಬವರ ಹೋಟೆಲ್ನಲ್ಲಿ ದಲಿತ ಸಮುದಾಯದ ವೇಟರ್ ಮೇಲೆ ಸ್ಟಾರ್ ನಟರೊಬ್ಬರು ಹಲ್ಲೆ ನಡೆಸಿದ್ದು, ಆತನ ಕಣ್ಣಿಗೆ ಗಾಯವಾಗಿದೆ. ಹೋಟೆಲ್ ಸಿಸಿಟಿವಿ ಪರಿಶೀಲಿಸಿ, ಹಲ್ಲೆಗೊಳಗಾದ ವೇಟರ್ನನ್ನು ವಿಚಾರಣೆ ನಡೆಸಿದರೆ ಮಾಹಿತಿ ಸಿಗಬಹುದು. ಘಟನೆಯಿಂದ ದಲಿತ ಸಮುದಾಯದಲ್ಲಿ ಆತಂಕ ಮೂಡಿದೆ. ಜನ ಸಾಮಾನ್ಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದಿದ್ದಾರೆ.
ಲೋನ್ ವಿಚಾರದಲ್ಲಿ ಮಹಿಳೆಯೊಬ್ಬರನ್ನು ಸ್ವಾರ್ಥಕ್ಕೆ ಬಳಸಿಕೊಂಡು, ಪೊಲೀಸರಿಂದ ಒತ್ತಡ ತಂದು ಪ್ರಭಾವಿಗಳು ಮಾತ್ರ ಪ್ರಕರಣದಿಂದ ನುಣುಚಿಕೊಳ್ಳುತ್ತಿದ್ದಾರೆ. ಇದು ಸಾಮಾನ್ಯ ಮಹಿಳೆಯರಲ್ಲಿ ನ್ಯಾಯದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ. ಇದು ಸಾಮಾನ್ಯ ವ್ಯಕ್ತಿಯಾಗಿದ್ದರೆ ಸುಮ್ಮನೆ ಬಿಡುತ್ತಿದ್ದರೆ? ಜನ ಸಾಮಾನ್ಯರಿಗೊಂದು ನ್ಯಾಯಾವೇ ಎಂದು ಇಂದ್ರಜಿತ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದಾರೆ.