ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಘಾಟು ಇರುವ ಬಗ್ಗೆ ಮಾತುಗಳು ಕೇಳಿ ಬಂದಿದ್ದು, ನಶಾ ಲೋಕದಲ್ಲಿ ತೇಲಾಡುವ ಕೆಲ ಪ್ರತಿಷ್ಠಿತ ನಟ, ನಟಿ, ನಿರ್ದೇಶಕರು, ಸಂಗೀತಗಾರರಿಗೆ ಒಂದೆಡೆ ನಡುಕ ಶುರುವಾಗಿದೆ. ಮತ್ತೊಂದೆಡೆ ಮೊನಾಲಿಸಾ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ತನಗೆ ಗೊತ್ತಿರುವವರ ಹೆಸರು ಹೇಳಲು ನಾನು ರೆಡಿ ಇದ್ದೇನೆ ಎಂದಿದ್ದಾರೆ.
ಹೀಗಾಗಿ ಇಂದು ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ಹಾಜರಾಗಲು ಸಿಸಿಬಿ ಟೈಂ ಫಿಕ್ಸ್ ಮಾಡಿದೆ. ಡ್ರಗ್ಸ್ ದಂಧೆಯ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಿದ ಕಾರಣ ಇಂದು 11 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾಗಿ ತಮಗೆ ಗೊತ್ತಿರುವ ಮಾಹಿತಿ ನೀಡಲಿದ್ದಾರೆ. ಸಿಸಿಬಿ, ಡಿಸಿಪಿ ರವಿ ನೇತೃತ್ವದಲ್ಲಿನ ತಂಡ ಈಗಾಗಲೇ ಕೆಲ ಪ್ರಶ್ನೆಗಳನ್ನು ತಯಾರಿ ಮಾಡಿ ಲಂಕೇಶ್ ಅವರಿಂದ ಮಾಹಿತಿ ಕಲೆಹಾಕಲಿದೆ. ಇಂದ್ರಜಿತ್ ಲಂಕೇಶ್ ಡ್ರಗ್ಸ್ ದಂಧೆ ಬಗ್ಗೆ ತಮ್ಮ ಬಳಿ ಇರುವ ಮಾಹಿತಿ ಹಂಚಿಕೊಂಡರೆ ಹಲವಾರು ನಟ-ನಟಿಯರ ಹೆಸರು ಬಹಿರಂಗವಾಗಲಿದೆ ಎನ್ನಲಾಗುತ್ತಿದೆ. ಪ್ರಕರಣ ಗಂಭೀರವಾದ ಕಾರಣ ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಸುಮೋಟೋ ಪ್ರಕರಣ ದಾಖಲು ಮಾಡಿ ಬಹುತೇಕ ಮಂದಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.