ಕರ್ನಾಟಕ

karnataka

ETV Bharat / state

ಸ್ಥಿರಾಸ್ತಿ ಒತ್ತೆಯಿಡಲು ಮುಂದಾದ ಮಂಗಳೂರು ಪಾಲಿಕೆ: ಹೈಕೋರ್ಟ್​ನಿಂದ ರಾಜ್ಯಸರ್ಕಾರಕ್ಕೆ ನಿರ್ದೇಶನ - High Court news

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾದ ಅನಾಹುತದಲ್ಲಿ, ನೆಲೆ ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸಲು ಪಾಲಿಕೆಯ ಸ್ಥಿರಾಸ್ತಿಯನ್ನು ಅಡವಿಟ್ಟು ಬ್ಯಾಂಕಿನಿಂದ ಸಾಲ ಪಡೆದುಕೊಳ್ಳಲು ಪಾಲಿಕೆಗೆ ಅನುಮತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಹೈಕೋರ್ಟ್​
ಹೈಕೋರ್ಟ್​

By

Published : Oct 14, 2020, 11:14 PM IST

ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾದ ಅನಾಹುತದಲ್ಲಿ ನೆಲೆ ಕಳೆದುಕೊಂಡಿರುವ ಕುಟುಂಬಗಳಿಗೆ ಪರಿಹಾರ ನೀಡಲು ಪಾಲಿಕೆಯ ಸ್ಥಿರಾಸ್ತಿಯನ್ನು ಅಡವಿಟ್ಟು ಬ್ಯಾಂಕಿನಿಂದ ಸಾಲ ಪಡೆದುಕೊಳ್ಳಲು ಪಾಲಿಕೆಗೆ ಅನುಮತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ದುರ್ಘಟನೆಯಲ್ಲಿ ನೆಲೆ ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸಲು ಹಾಗೂ ಘನತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ ಸಂಬಂಧಿಸಿದಂತೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಅರ್ಜಿ ವಿಚಾರಣೆ ವೇಳೆ ಮಂಗಳೂರು ಮಹಾನಗರಪಾಲಿಕೆ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ಹಣಕಾಸಿನ ಕೊರತೆ ಇದೆ. ಅಲ್ಲದೆ 14 ಕೋಟಿ ರೂಪಾಯಿ ಪರಿಹಾರದ ಹಣವನ್ನು ಸರ್ಕಾರ ಇಂದಿಗೂ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಸರ್ಕಾರಕ್ಕೆ ಹಣ ಬಿಡುಗಡೆ ಮಾಡುವ ಇಚ್ಛೆ ಇದ್ದಂತೆ ಕಾಣುತ್ತಿಲ್ಲ. ಇನ್ನು ಪಾಲಿಕೆಯ ಬಳಿಯೂ ಹಣವಿಲ್ಲ ಎನ್ನುತ್ತಿದ್ದೀರಿ. ಆದರೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ನೀಡಲೇಬೇಕು. ಹೀಗಾಗಿ ಪಾಲಿಕೆಯ ಸ್ಥಿರಾಸ್ತಿಯನ್ನು ಅಡವಿಟ್ಟು ಬ್ಯಾಂಕಿನಿಂದ ಹಣ ಪಡೆದು ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಸೂಚಿಸಿದ ಪೀಠ, ಈ ಸಂಬಂಧ ಪಾಲಿಕೆಗೆ ಒಂದು ವಾರದೊಳಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.

ಇದೇ ವೇಳೆ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡ ಪೀಠ ಸಂತ್ರಸ್ತರಿಗೆ ಪರಿಹಾರ ನೀಡಲು 22 ಕೋಟಿ ರೂಪಾಯಿಗಳ ಬದಲು 5 ಕೋಟಿ ರೂಪಾಯಿ ಪರಿಹಾರ ಹಣ ಬಿಡುಗಡೆ ಮಾಡಿದ್ದು ಏಕೆ? ಬಾಕಿ ಹಣ ಏಕೆ ಬಿಡುಗಡೆ ಮಾಡಲಿಲ್ಲ ಎಂಬ ಕುರಿತು ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿತು. ಘಟನೆಯಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ ಮತ್ತು ಮನೆ ಹಾನಿಗೆ ಪರಿಹಾರ ನೀಡಿಲ್ಲ ಎಂಬ ವಿಚಾರಗಳಿಗೆ ಪಾಲಿಕೆ ಆಯುಕ್ತರು ಸ್ಪಷ್ಟನೆ ನೀಡಬೇಕು ಮತ್ತು ಮುಂದಿನ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ವಿವರಣೆ ನೀಡಬೇಕು ಎಂದು ನಿರ್ದೇಶಿಸಿತು. ಅಲ್ಲದೇ, ತಪ್ಪಿತಸ್ಥರ ವಿರುದ್ಧ‌ ಈವರೆಗೂ ಯಾವ ಕಾರಣಕ್ಕಾಗಿ ಕ್ರಮಕೈಗೊಂಡಿಲ್ಲ ಎಂಬ ಕುರಿತು ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details