ಬೆಂಗಳೂರು : ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಜಿಎಸ್‌ಟಿ) ಜಾರಿಯಾಗುವ ಮುನ್ನ ಸರ್ಕಾರಿ ಗುತ್ತಿಗೆ ಕಾಮಗಾರಿಗಳ ಟೆಂಡರ್ ಪಡೆದು, ಜಿಎಸ್‌ಟಿ ಜಾರಿಯಾದ ನಂತರ ಕಾಮಗಾರಿ ಪೂರ್ಣಗೊಳಿಸಿದ ಪ್ರಕರಣಗಳ ಪ್ರತ್ಯೇಕವಾಗಿ ಲೆಕ್ಕ ಹಾಕಿ ತೆರಿಗೆ ಪಾವತಿಸಿಕೊಳ್ಳುವುದೂ ಸೇರಿದಂತೆ, ತೆರಿಗೆ ಪಾವತಿಸುವ ವಿಚಾರದಲ್ಲಿ ಉದ್ಭವಿಸಿದ್ದ ಗೊಂದಲ ಪರಿಹರಿಸಲು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನವನ್ನು ಕೊಟ್ಟಿದೆ.
ಗುತ್ತಿಗೆದಾರ ಸಿ.ಚಂದ್ರಶೇಖರಯ್ಯ ಮತ್ತು ನಂದೀಶ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಗುತ್ತಿಗೆದಾರರು ಮತ್ತು ಗುತ್ತಿಗೆ ಕಂಪನಿಗಳು ಸಲ್ಲಿಸಿದ್ದ 15 ಕ್ಕೂ ಅಧಿಕ ತಕರಾರು ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ. ಅಲ್ಲದೆ, ಜಿಎಸ್‌ಟಿ ಜಾರಿಗೂ ಮುನ್ನ ಕರ್ನಾಟಕ ಮೌಲ್ಯಾಧಾರಿತ ತೆರಿಗೆ (ಕೆವ್ಯಾಟ್) ವ್ಯವಸ್ಥೆ ಇದ್ದಾಗ ನಡೆದಿರುವ ಸರ್ಕಾರಿ ಗುತ್ತಿಗೆ ಕೆಲಸಗಳು ಮತ್ತು ಗುತ್ತಿಗೆದಾರರಿಗೆ ಪಡೆದಿರುವ ಬಿಲ್‌ಗಳನ್ನು ಲೆಕ್ಕ ಹಾಕಬೇಕು. ಜಿಎಸ್‌ಟಿ ಜಾರಿಯಾಗುವ (2017 ರ ಜುಲೈ 1) ಮುನ್ನ ಪಡೆದಿರುವ ಹಣ ಕೆವ್ಯಾಟ್ ವ್ಯವಸ್ಥೆ ಅಡಿ ವಿಶ್ಲೇಷಿಸಬೇಕು ಎಂದು ತಿಳಿಸಿದೆ.
ಜಿಎಸ್‌ಟಿ ಜಾರಿಗೂ ಮುನ್ನ ವ್ಯಾಟ್ ವ್ಯವಸ್ಥೆ ಇದ್ದಾಗ ಸರ್ಕಾರಿ ಗುತ್ತಿಗೆದಾರರು ನಡೆಸಿರುವ ಕೆಲಸಗಳು ಮತ್ತು ಅದಕ್ಕಾಗಿ ಅವರು ಪಡೆದಿರುವ ಹಣವನ್ನು ಲೆಕ್ಕ ಹಾಕಬೇಕು. 2017 ರ ಜು.1 ಕ್ಕೂ ಮುನ್ನ ಪಡೆದಿರುವ ಹಣವನ್ನು ವ್ಯಾಟ್ ವ್ಯವಸ್ಥೆ ಅಡಿ ವಿಶ್ಲೇಷಿಸಬೇಕು. ಮೂಲ ಗುತ್ತಿಗೆಯ ಪ್ರಕಾರ ಬಾಕಿಯಿರುವ ಕೆಲಸವನ್ನು 1017ರ ಜು.1ರ ನಂತರ ನಡೆಸಿದ್ದರೆ, ಆ ಬಗ್ಗೆ ಲೆಕ್ಕ ಹಾಕಬೇಕು. ಕಾಮಗಾರಿಗೆ ಬಳಸಿದ ಸಾಮಾಗ್ರಿಗಳ ದರ ಪ್ರತ್ಯೇಕಿಸಬೇಕು, ತೆರಿಗೆ ಪಡೆದುಕೊಳ್ಳಬೇಕು ಎಂದು ಪೀಠ ಹೇಳಿದೆ.