ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಸೂಚಿಸಿ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಕೆ - ಚುನಾವಣಾ ಆಯೋಗ

ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡಿ ಗೆದ್ದಿರುವ ಆರೋಪದ ಸಂಬಂಧ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಿರ್ದೇಶನ ಕೊಡಬೇಕು ಎಂದು ಆಗ್ರಹಿಸಿ, ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

BJP submits complaint to Election Commission
ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಸೂಚಿಸಿ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಕೆ

By ETV Bharat Karnataka Team

Published : Sep 22, 2023, 11:03 PM IST

ಬೆಂಗಳೂರು:ಮತದಾರರಿಗೆ ಆಮಿಷವೊಡ್ಡಿ ಗೆಲವು ಸಾಧಿಸಿರುವ ಆರೋಪದ ಸಂಬಂಧ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವಂತೆ ನಿರ್ದೇಶನ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ದೂರು ಕೊಟ್ಟಿದೆ.

ರಾಜ್ಯ ಚುನಾವಣಾಧಿಕಾರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ನೇತೃತದ ನಿಯೋಗ ಭೇಟಿ ನೀಡಿ, ಮತದಾರರಿಗೆ ಆಮಿಷವೊಡ್ಡಿ ಗೆದ್ದಿರುವ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಈ ಕುರಿತು ನಿರ್ದೇಶನ ನೀಡುವಂತೆ ಆಯೋಗಕ್ಕೆ ಮನವಿ ಸಲ್ಲಿಕೆ ಮಾಡಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್​. ರವಿಕುಮಾರ್ ಅವರು, ''ಸಿದ್ದರಾಮಯ್ಯನವರು ರಾಜೀನಾಮೆ ನೀಡುವಂತೆ ನಿರ್ದೇಶಿಸಲು ಚುನಾವಣಾಧಿಕಾರಿಯನ್ನು ಕೋರಲಾಗಿದೆ. ಮತದಾರರಿಗೆ ಆಸೆ, ಆಮಿಷ, ಒತ್ತಡ ವಿಧಿಸಬಾರದೆಂದು ಕಾನೂನು ಇದೆ. ಆದರೆ, ಬಟ್ಟೆ ತೊಳೆಯುವ ಮತ್ತು ಇಸ್ತ್ರಿ ಹಾಕುವ ಮಡಿವಾಳ ಸಮುದಾಯಕ್ಕೆ ಇಸ್ತ್ರಿ ಪೆಟ್ಟಿಗೆ ಮತ್ತು ಮನೆ ಮನೆಗೆ ಕುಕ್ಕರ್, ಹಣ ಹಂಚಿದ ಬಗ್ಗೆ ಸಿದ್ದರಾಮಯ್ಯನವರ ಪುತ್ರ, ಮಾಜಿ ಶಾಸಕ ಯತೀಂದ್ರ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಇದರ ವಿಡಿಯೋ ತುಣುಕು ಹರಿದಾಡುತ್ತಿದೆ. ವಿಷಯ ನಾಡಿನಾದ್ಯಂತ ಪಸರಿಸಿದೆ'' ಎಂದು ತಿಳಿಸಿದರು.

''ಸಿದ್ದರಾಮಯ್ಯನವರು ಡಾ. ಬಿ. ಆರ್​. ಅಂಬೇಡ್ಕರ್​ ಅವರ ಸಂವಿಧಾನದ ಬಗ್ಗೆ ಬಹಳ ಮಾತನಾಡುತ್ತಾರೆ. ಅದೇ ಸಂವಿಧಾನ, ಅದೇ ಚುನಾವಣೆ ನೀತಿಸಂಹಿತೆ ಪ್ರಕಾರ ಸಿದ್ದರಾಮಯ್ಯನವರು ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಇದರ ಪರಿಣಾಮವಾಗಿ ಅವರು ಗೆದ್ದಿದ್ದಾಗಿ ಅವರ ಮಗನೇ ಹೇಳಿದ್ದಾರೆ'' ಎಂದು ಅವರು ತಿಳಿಸಿದರು.

ಇದೇ ವೇಳೆ, ''ಜೆಡಿಎಸ್ ಎನ್‍ಡಿಎ ಭಾಗವಾಗಿರುವುದರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಆನೆಯ ಬಲ ಬಂದಂತಾಗಿದೆ'' ಎಂದು ಅವರು, ''ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಈ ಮೈತ್ರಿಕೂಟ ಗೆಲ್ಲಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮೂರೇ ತಿಂಗಳಲ್ಲಿ ಆಡಳಿತ ವಿರೋಧಿ ಅಲೆ ಇದೆ. ಬೆಲೆ ಏರಿಕೆಯಿಂದ ಜನರು ಶಾಪ ಹಾಕುವಂತಾಗಿದೆ. ಗ್ಯಾರಂಟಿಗಳನ್ನು ಮನೆ ಮನೆಗೆ ಮುಟ್ಟಿಸದೆ ಇರುವುದು, ಕುಡಿಯುವ ನೀರಿಲ್ಲದಿದ್ದರೂ ಕಾವೇರಿ ನೀರನ್ನು ತಮಿಳುನಾಡಿನ ಹೊಲಗಳಿಗೆ ಹರಿಸುತ್ತಿರುವುದು, ಬರ ನಿರ್ವಹಣೆಯಲ್ಲಿ ವೈಫಲ್ಯ, ಮೇವಿಲ್ಲ, ನೀರಿಲ್ಲ, ವಿದ್ಯತ್​ ಇಲ್ಲ, ಒಂದು ಕಿಮೀ ರಸ್ತೆ ಮಾಡಿಲ್ಲ ಎಂಬುದು ರಾಜ್ಯದ ಪರಿಸ್ಥಿತಿಯಾಗಿದೆ. ಇದು ನಮ್ಮ ಗೆಲುವಿಗೆ ಪೂರಕವಾಗಿದೆ'' ಎಂದು ಹೇಳಿದರು.

''ಮೈತ್ರಿ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನವೇ ನಮ್ಮೆಲ್ಲರ ತೀರ್ಮಾನ ಆಗಿದೆ'' ಎಂದು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ''ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಇವತ್ತು ದೆಹಲಿಯಲ್ಲಿ ನಮ್ಮ ಮುಖಂಡರನ್ನು ಭೇಟಿ ಮಾಡಿ ಎನ್‍ಡಿಎಗೆ ಬೆಂಬಲ ಸೂಚಿಸಿದ್ದಾರೆ. ದೇಶದ ಸುಭದ್ರತೆಗಾಗಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಜೆಡಿಎಸ್ ನಮ್ಮ ಜೊತೆ ಬಂದಿರುವುದು ಬಹಳ ಸಂತಸದ ಸಂಗತಿಯಾಗಿದೆ'' ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ನಿಯೋಗದಲ್ಲಿದ್ದರು.

ಇದನ್ನೂ ಓದಿ:BJP-JDS alliance: ಎನ್​ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್​ - ಹೊಸ ರಾಜಕೀಯ ಶಕೆ ಆರಂಭ ಎಂದ ಕುಮಾರಸ್ವಾಮಿ

ABOUT THE AUTHOR

...view details