ಬೆಂಗಳೂರು: ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವೃಂದಕ್ಕೆ ಸೇವೆಯೊಳಗಿನ ನೇರ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ಈ ಸಂಬಂಧ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ನೇರ ನೇಮಕಾತಿಗಾಗಿ 100 ರೋಸ್ಟರ್ ಪಾಯಿಂಟ್ಸ್ ಮತ್ತು 20 ಪಾಯಿಂಟ್ಸ್ ಗಳ ಸಮತಲ ಮೀಸಲಾತಿಯನ್ನು ಹೊಸದಾಗಿ ಪ್ರಾರಂಭಿಸಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ, ಸಹಾಯಕರ ವೃಂದದ ಸೇವೆಯೊಳಗಿನ ನೇರ ನೇಮಕಾತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಮಾಡಲು ಕ್ರಮ ವಹಿಸುವಂತೆ ಸೂಚಿಸಲಾಗಿತ್ತು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಜಿಲ್ಲಾ ಪಂಚಾಯತಿಗಳಲ್ಲಿ ವಿವಿಧ ರೀತಿಯಲ್ಲಿ ನೇಮಕಾತಿ ಆದೇಶಗಳನ್ನು ಹೊರಡಿಸುತ್ತಿರುವುದರಿಂದ ಅರ್ಹ ನೌಕರರಿಗೆ ಅನ್ಯಾಯವಾಗಲಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಅಭಿಪ್ರಾಯ ಬರುವವರೆಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡುವುದನ್ನು ತಡೆಹಿಡಿಯುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡುವ ಬಗ್ಗೆ ಏಕರೂಪವಾಗಿ ಮಾರ್ಗಸೂಚಿಗಳನ್ನು ಹೊರಡಿಸಲು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುವುದರಿಂದ ಈಗಾಗಲೇ ನೇಮಕಾತಿ ಮಾಡಿರುವ ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ ಸೇವೆಯೊಳಗೆ ನೇರ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡಹಿಡಿಯುವ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ನಾಳೆ ಸಂಜೆವರೆಗೆ ನಿಷೇಧಾಜ್ಞೆ: ಐಜಿ ತ್ಯಾಗರಾಜನ್