ಕರ್ನಾಟಕ

karnataka

ETV Bharat / state

65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ದೇವಸ್ಥಾನಗಳಲ್ಲಿ ನೇರ ದರ್ಶನ ವ್ಯವಸ್ಥೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಮುಜುರಾಯಿ ಇಲಾಖೆ ವ್ಯಾಪ್ತಿಯ ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.

direct-darshan-in-temples-for-senior-citizens-in-karnataka
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ದೇವಸ್ಥಾನಗಳಲ್ಲಿ ನೇರ ದರ್ಶನ ವ್ಯವಸ್ಥೆ : ರಾಜ್ಯ ಸರ್ಕಾರ ಆದೇಶ

By

Published : Jun 21, 2023, 7:55 PM IST

Updated : Jun 21, 2023, 8:04 PM IST

ಬೆಂಗಳೂರು : ತಿರುಪತಿ - ತಿರುಮಲದ ಮಾದರಿಯಂತೆ ಇನ್ನು ಮುಂದೆ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ನಾಗರೀಕರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯುವ ಅಗತ್ಯವಿಲ್ಲ. ನೇರವಾಗಿ ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಹಿರಿಯ ನಾಗರೀಕರ ಬಹುದಿನಗಳ ಬೇಡಿಕೆಯಂತೆ 65 ವರ್ಷಕ್ಕಿಂತ ಮೇಲ್ಪಟ್ಟವರು ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರವರ್ಗ 'ಎ' ಮತ್ತು 'ಬಿ ಶ್ರೇಣಿಯ ದೇವಾಲಯಗಳಲ್ಲಿ, 65 ವರ್ಷ ಮೇಲ್ಪಟ್ಟ ಇರುವ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ. ಇದರಿಂದ ವಯಸ್ಸಿನ ಅಧಾರದ ಮೇಲೆ ಸರತಿಯ ಸಾಲಿನಲ್ಲಿ ನಿಲ್ಲದಂತೆ ನೇರವಾಗಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಗೆ ಆಗಮಿಸುತ್ತಿರುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹಿರಿಯ ನಾಗರೀಕರಿಗೆ ದೇವರ ದರ್ಶನಕ್ಕೆ, ಸರತಿ ಸಾಲಿನಲ್ಲಿ ನಿಂತುಕೊಳ್ಳುವುದು ಕಷ್ಟಕರವಾಗಿರುವುದರಿಂದ 65 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಹಿರಿಯ ನಾಗರೀಕರು ಅವರ ವಯಸ್ಸಿನ ದಾಖಲೆ/ ಆಧಾರ ಕಾರ್ಡ್ ತೋರಿಸಿದಲ್ಲಿ, ಅವರಿಗೆ ದೇವರ ದರ್ಶನಕ್ಕೆ ಅನುಕೂಲವಾಗುವ ವ್ಯವಸ್ಥೆಯನ್ನು ಕಲ್ಪಿಸಲು ಸೂಚಿಸಲಾಗಿದೆ. ದೇವಾಲಯದಲ್ಲಿ ಸ್ಥಳಾವಕಾಶ ಇದ್ದಲ್ಲಿ ಹಿರಿಯ ನಾಗರೀಕರಿಗೆಂದು ಪ್ರತ್ಯೇಕ ಸ್ಥಳ ಕಾಯ್ದಿರಿಸಲು ಸೂಚಿಸಲಾಗಿದೆ.

ರಾಜ್ಯ ಸರ್ಕಾರ ಆದೇಶ

ದೇವಾಲಯಗಳಲ್ಲಿ, ಹಿರಿಯ ನಾಗರೀಕರ ಸಹಾಯ ಕೇಂದ್ರವನ್ನು (Help desk) ಸ್ಥಾಪಿಸುವುದು, ಸಹಾಯ ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿಗಳನ್ನು ನಿಯೋಜನೆ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾರಿಗೆ ಸಚಿವರೂ ಆಗಿರುವ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

ಆನ್‌ ಲೈನ್‌ ಬುಕ್ಕಿಂಗ್ ನಲ್ಲೂ ರಿಯಾಯಿತಿ :ದೇವಸ್ಥಾನಗಳಲ್ಲಿ ವಯಸ್ಸಾದವರು ಸಾಮಾನ್ಯ ಕ್ಯೂನಲ್ಲಿ ನಿಂತು ಹೋಗಲು ಸಾಧ್ಯವಿಲ್ಲ. ಸಹಜವಾಗಿ ಕೆಲವರಿಗೆ 65 ವರ್ಷ ಆದ ನಂತರ ತುಂಬಾ ಹೊತ್ತು ನಿಲ್ಲಲು ಸಾಧ್ಯವಾಗುವುದಿಲ್ಲ. ಅಂತಹವರಿಗೆ ಪ್ರತ್ಯೇಕ ಸರತಿಯ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆನ್​ಲೈನ್ ಬುಕ್ಕಿಂಗ್‌ನಲ್ಲೂ ವಿಶೇಷವಾಗಿ ಹಿರಿಯರಿಗೆ ವಸತಿಗಳನ್ನು ಕೊಡಲು ಸೂಚಿಸಿರುವ ಸಚಿವ ರಾಮಲಿಂಗಾರೆಡ್ಡಿ ಅವರು, ಎಲ್ಲ ದೇವಸ್ಥಾನಗಳು ಸ್ವಚ್ಛವಾಗಿರಬೇಕು. ದೇವಸ್ಥಾನಗಳಲ್ಲಿ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದ್ದಾರೆ.

ಅರ್ಚಕರ ಒಕ್ಕೂಟದಿಂದ ಪತ್ರ: ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟವು ಕರ್ನಾಟಕ ಸರ್ಕಾರದ ಹಿಂದೂ ದೇವಾಲಯಗಳಲ್ಲಿ ಹಿರಿಯ ನಾಗರೀಕರಿಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿತ್ತು. 65 ವರ್ಷ ಮೇಲ್ಪಟ್ಟವರಿಗೆ ದೇವಾಲಯಗಳಲ್ಲಿ ನೇರ ದರ್ಶನಕ್ಕೆ ಅವಕಾಶ ಕೊಡಬೇಕೆಂದು ಒತ್ತಾಯಿಸಲಾಗಿತ್ತು. ಈ ಬಗ್ಗೆ ಮುಜುರಾಯಿ ಇಲಾಖೆಗೂ ಪತ್ರ ಬರೆಯಲಾಗಿತ್ತು. ಆದ್ದರಿಂದ, ರಾಜ್ಯದ ಎ‌ ಮತ್ತು ಬಿ ವರ್ಗದ ಸಂಸ್ಥೆಗಳಲ್ಲಿ ಹಿರಿಯನಾಗರೀಕರಿಗೆ ಕ್ಯೂ ಇಲ್ಲದೇ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ :ಮಲೆನಾಡಿನಲ್ಲಿ ಮಳೆಗಾಗಿ ಪೂಜೆ ಸಲ್ಲಿಸುತ್ತಿದ್ದ ವೇಳೆಯೇ ಸುರಿದ ಧಾರಾಕಾರ ಮಳೆ- ವಿಡಿಯೋ

Last Updated : Jun 21, 2023, 8:04 PM IST

ABOUT THE AUTHOR

...view details