ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯವರಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಚಿತ್ರ ನಟ ಜಗ್ಗೇಶ್ ಹಾಗು ಕಾಂಗ್ರೆಸ್ ಪಕ್ಷದ ಸಂಸದ ಜೈರಾಮ್ ರಮೇಶ್ ಜಯ ಖಚಿತವಾಗಿದ್ದು, ನಾಲ್ಕನೇ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಾಂಗ್ರೆಸ್ಗೆ ಗೆಲುವು ಕಷ್ಟಕರ :ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ಬಿಜೆಪಿಯಿಂದ ಲೆಹರ್ ಸಿಂಗ್ , ಕಾಂಗ್ರೆಸ್ ನಿಂದ ಮನ್ಸೂರ್ ಅಲಿಖಾನ್, ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿದ್ದು, ಗೆಲುವಿಗಾಗಿ ಭಾರಿ ಸ್ಪರ್ಧೆ ಇದೆ. ಈ ಮೂರು ಅಭ್ಯರ್ಥಿಗಳು ಗೆಲುವಿಗಾಗಿ ತಮ್ಮದೇ ಆದ ಕಾರ್ಯತಂತ್ರದಲ್ಲಿ ತೊಡಗಿದ್ದಾರೆ. ಯಾವುದೇ ಅಡ್ಡಮತದಾನ ನಡೆಯದಿದ್ದರೆ, ಚಲಾವಣೆಯಾದ ಮತಗಳು ಅಸಿಂಧುಗೊಳ್ಳದಿದ್ದರೆ, ಆಯಾ ಪಕ್ಷಗಳ ಶಾಸಕರು ವಿಪ್ ಪ್ರಕಾರ ಮತಚಲಾವಣೆ ಮಾಡಿದರೆ ಕಾಂಗ್ರೆಸ್ ಗೆ ಗೆಲುವು ಕಷ್ಟಕರವಾಗಿದೆ. ಬಿಜೆಪಿಯ ಲೆಹರ್ ಸಿಂಗ್ ಮತ್ತು ಜೆಡಿಎಸ್ ನ ಕುಪೇಂದ್ರ ರೆಡ್ಡಿ ನಡುವೆ ನೇರ ಪೈಪೋಟಿ ಉಂಟಾಗಲಿದೆ.
ಯಾರಿಗೆ ಎಷ್ಟು ಮತ ಬೇಕು?: ಬಿಜೆಪಿಯಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ತಲಾ 45 ರಂತೆ ಮತ ಚಲಾವಣೆ ಬಳಿಕ ಮೂರನೇ ಅಭ್ಯರ್ಥಿಗೆ ಹೆಚ್ಚುವರಿಯಾಗಿ 32 ಮತಗಳು ಉಳಿಯಲಿವೆ. ಹಾಗೆಯೇ ಜೆಡಿಎಸ್ನಲ್ಲಿ ಸಹ 32 ಮತಗಳು ಇವೆ. ಪ್ರಥಮ ಪ್ರಾಶಸ್ತ್ಯದ ಮತಗಳು ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಒಂದೇ ಸಂಖ್ಯೆಯದ್ದಾಗಿವೆ. ಆದರೆ, ದ್ವಿತೀಯ ಪ್ರಾಶಸ್ತ್ಯದ ಮತಗಳ ಲೆಕ್ಕಾಚಾರದಲ್ಲಿ ಬಿಜೆಪಿಗಿಂತ ಜೆಡಿಎಸ್ ಕಡಿಮೆ ಮತಗಳನ್ನು ಹೊಂದಿದೆ. ಮೊದಲನೇ ಪ್ರಾಶಸ್ತ್ಯದ ಮತಗಳ ಎಣಿಕೆ ಸುತ್ತಿನಲ್ಲಿಯೇ ಬಿಜೆಪಿ ತನ್ನ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲುವಿಗೆ ಯತ್ನಿಸುತ್ತಿದೆ. ಒಂದೊಮ್ಮೆ ಇದು ಸಾಧ್ಯವಾಗದಿದ್ದರೆ ದ್ವಿತೀಯ ಪ್ರಾಶಸ್ತ್ಯ ಮತಗಳ ಸಹಾಯದಿಂದ ಗೆಲ್ಲುವ ತಂತ್ರಗಾರಿಕೆಯನ್ನು ಬಿಜೆಪಿ ಹೊಂದಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಮತ್ತು ಜೆಡಿಎಸ್ ನಡುವಿನ ನೇರ ಪೈಪೋಟಿ ಸಂದರ್ಭದಲ್ಲಿ ಪ್ರಥಮ ಪ್ರಾಶಸ್ತ್ಯ ಹಾಗು ದ್ವಿತೀಯ ಪ್ರಾಶಸ್ತ್ಯದ ಮತಗಳ ಆಧಾರ ಮತ್ತು ಮತಗಳ ಮೌಲ್ಯದ ಲೆಕ್ಕಾಚಾರದ ಪ್ರಕಾರ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಆತ್ಮ ಸಾಕ್ಷಿ ಮತಗಳ ನಿರೀಕ್ಷೆ : ಸ್ವಂತ ಶಕ್ತಿಯಿಂದ ನಾಲ್ಕನೇ ಸ್ಥಾನವನ್ನು ಗೆಲ್ಲಲು ಕಡಿಮೆ ಅವಕಾಶ ಹೊಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು 'ಆತ್ಮಸಾಕ್ಷಿ'ಮತಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿವೆ. ಬಿಜೆಪಿ ವಿರುದ್ಧ ಜಾತ್ಯತೀತ ಪಕ್ಷಗಳು ಒಂದಾಗಬೇಕೆನ್ನುವ ಆಶಯ ಸಾಕಾರಗೊಳಿಸಲು ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರುಗಳು ಪಕ್ಷದ ಚೌಕಟ್ಟನ್ನು ಮೀರಿ ತಮ್ಮ ಆತ್ಮ ಸಾಕ್ಷಿಗನುಗುಣವಾಗಿ ಮತ ಚಲಾವಣೆ ಮಾಡಬೇಕೆಂದು ಎರಡೂ ಪಕ್ಷಗಳು ಶಾಸಕರಿಗೆ ಕರೆ ನೀಡತೊಡಗಿವೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಾಂಗ್ರೆಸ್ ಪಕ್ಷದ ಹೆಚ್ಚುವರಿ ಶಾಸಕರ ಮತಗಳನ್ನು ಅಪೇಕ್ಷಿಸುತ್ತಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಣಿಸಲು ಆತ್ಮ ಸಾಕ್ಷಿ ಮತಗಳನ್ನು ತಮ್ಮ ಪಕ್ಷದ ಅಭ್ಯರ್ಥಿ ಮನ್ಸೂರ್ ಅಲಿಖಾನ್ಗೆ ನೀಡುವಂತೆ ಕಾಂಗ್ರೆಸ್ ಪಕ್ಷ ಸಹ ಜೆಡಿಎಸ್ ಶಾಸಕರಲ್ಲಿ ಮನವಿ ಮಾಡುತ್ತಿದೆ. ಸದ್ಯದ ಪರಿಸ್ಥಿಯಲ್ಲಿ ಜೆಡಿಎಸ್ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡರು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವ ಉದ್ದೇಶ ಹೊಂದಿಲ್ಲ. ಅದರಂತೆ ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕರಾದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ಆಶಯ ಸಹ ವ್ಯಕ್ತಪಡಿಸಿಲ್ಲ. ಇವರಿಬ್ಬರ ರಾಜಕೀಯ ಕೆಸರೆರಚಾಟದ ಲಾಭ ಬಿಜೆಪಿ ಅಭ್ಯರ್ಥಿ ಪಡೆದುಕೊಳ್ಳುವುದು ನಿಚ್ಚಳವಾಗಿದೆ.
ಇದನ್ನೂ ಓದಿ: ಪಾಪದ ಅಭ್ಯರ್ಥಿಗಳನ್ನು ಬಂಧಿಸುವುದು ಬಿಟ್ಟು ಅಕ್ರಮದ ಮುಖ್ಯ ಆರೋಪಿಯನ್ನ ಬಂಧಿಸಲಿ : ಡಿಕೆಶಿ