ಬೆಂಗಳೂರು :ಉದ್ಯೋಗ ಮಾರುಕಟ್ಟೆಗೆ ಅನುಗುಣವಾಗಿ ಡಿಪ್ಲೊಮಾ ಪಠ್ಯವನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಪ್ರಕಟಿಸಿದರು.
ನಗರದಲ್ಲಿ ಶುಕ್ರವಾರ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳಿಗೆ ಸಂಬಂಧಿಸಿದ ವಿಧಾನ ಪರಿಷತ್ ಸದಸ್ಯರ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಇರುವ ಡಿಪ್ಲೊಮಾ ಕೋರ್ಸ್‌ಗಳಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಸಿಗುತ್ತಿಲ್ಲ.
ಪ್ರತೀ ವರ್ಷಕ್ಕೆ ರಾಜ್ಯದಲ್ಲಿ 40,000 ಅಂತಿಮ ವರ್ಷದ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದು, ಈ ಪೈಕಿ ಕೊನೆ ಪಕ್ಷ ಶೇ.20ರಷ್ಟು ವಿದ್ಯಾರ್ಥಿಗಳಿಗೂ ಉದ್ಯೋಗ ಸಿಗುತ್ತಿಲ್ಲ. ಅದಕ್ಕೆ ಕಾರಣವಿಷ್ಟೇ ಈಗಿರುವ ಡಿಪ್ಲೊಮಾ ಪಠ್ಯವೂ ಸಕಾಲಿಕವಾಗಿಲ್ಲ, ಇವತ್ತಿನ ಕೈಗಾರಿಕೆ ಅಗತ್ಯಗಳಿಗೆ ಅದು ಅಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಅಗತ್ಯ ಇರುವ, ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಹಾಗೂ ಸದಾಕಾಲ ಕೆಲಸಕ್ಕೆ ಅರ್ಹತೆ ಕಲ್ಪಿಸಬಲ್ಲ ಪಠ್ಯವನ್ನು ಸಂಬಂಧಪಟ್ಟ ಎಲ್ಲರ ಜತೆ ಚರ್ಚಿಸಿ ರೂಪಿಸಲಾಗುತ್ತಿದೆ.
ಡಿಪ್ಲೊಮಾ ಕೋರ್ಸ್‌ನ ಪಠ್ಯವನ್ನು ಮರುಪರಿಷ್ಕಣೆ ಮಾಡುವ ಮೂಲಕ ನ್ಯಾಷನಲ್ ಕ್ವಾಲಿಫಿಕೇಶ್ ಬಗ್ಗೆ ಬದಲಾವಣೆ ಮಾಡಲಾಗಿದೆ. ಜತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಠ್ಯ ಮರುರೂಪಿಸಲಾಗುತ್ತಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ಯಾವುದೇ ರೀತಿಯ ಹಣಕಾಸಿನ ಹೊರೆ ಸರ್ಕಾರದ ಮೇಲೆ ಬೀಳುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ತಿಳಿಸಿದರು.
ಪರಿಷತ್ ಸದಸ್ಯರಿಂದ ಸಲಹೆ :ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈಗಾಗಲೇ ಅನೇಕ ಕ್ರಾಂತಿಕಾರಿ ಸುಧಾರಣೆಗಳನ್ನು ತರಲಾಗಿದೆ. ಆ ಬಗ್ಗೆ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರಿಗೆ ಎಲ್ಲ ಮಾಹಿತಿ ನೀಡಲಾಗಿದೆ.
ಮುಂದೆ ಕೈಗೊಳ್ಳಬಹುದಾದ ಸುಧಾರಣೆಗಳು, ನೂತನವಾಗಿ ಜಾರಿಗೆ ಬಂದಿರುವ 'ಕರ್ನಾಟಕ ಕಲಿಕಾ ನಿರ್ವಹಣಾ ವ್ಯವಸ್ಥೆ' (ಎಲ್‌ಎಂಎಸ್) ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪರಿಷತ್ ಸದಸ್ಯರು ಅನೇಕ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದರು.