ಬೆಂಗಳೂರು:ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಕೂಗು ಎದ್ದಿರುವಾಗ ಸಮುದಾಯದ ದೊಡ್ಡ ದೊಡ್ಡ ಮಠಾಧೀಶರು ಮೌನವಾಗಿರುವುದು ಯಾಕೆ? ವೀರಶೈವ ಲಿಂಗಾಯತ ಸಮುದಾಯದ ಶ್ರೀಗಳೇ ಆಗಿದ್ದಲ್ಲಿ ಕೂಡಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಆಗ್ರಹಿಸಿದ್ದಾರೆ.
ವಿಜಯನಗರದ ಸುಜ್ಞಾನ ಮಂಟಪದಲ್ಲಿ ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಶ್ರೀಗಳು, ನಾವು ನಮ್ಮ ಸಮಾಜವನ್ನೇ ಅಲಕ್ಷ ಮಾಡಿದ್ದಕ್ಕೆ ಈಗ ಪ್ರಾಯಶ್ಚಿತ್ತ ಅನುಭವಿಸಬೇಕಾಗಿದೆ. ಈಗ ಸಮಸ್ತ ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಮಾಡುವವರೆಗೆ ನಾವು ಹೋರಾಟ ಮಾಡಬೇಕು. ಯಾವುದೇ ಪರಿಸ್ಥಿತಿಯಲ್ಲಿ ಸಮುದಾಯ ಒಡೆಯದಂತೆ ನೋಡಿಕೊಂಡಿದ್ದೇವೆ. ಈಗ ಸಮುದಾಯಕ್ಕೆ ಏನುಬೇಕೋ ಅದನ್ನು ಕೊಡಬೇಕಾಗಿದೆ. ಅಂದು ಯಡಿಯೂರಪ್ಪ ತುರ್ತು ಸಚಿವ ಸಂಪುಟ ಸಭೆ ಕರೆದು ವೀರಶೈವಲಿಂಗಾಯತರನ್ನು ಒಬಿಸಿಗೆ ಸೇರ್ಪಡೆ ಮಾಡಲು ನಿರ್ಧಾರ ಮಾಡಿದ್ದರು. ಆದರೆ, ಇದ್ದಕ್ಕಿದ್ದಂತೆ ಹಿಂದೆ ಸರಿದರು. ಅಂದು ಅವರು ನಿರ್ಧಾರ ಕೈಗೊಂಡಿದ್ದರೆ ಪಂಚಮಸಾಲಿ ಜಗದ್ಗುರುಗಳು ಕಾಲಿಗೆ ಬೊಬ್ಬೆ ಬರುವ ಹಾಗೆ ಪಾದಯಾತ್ರೆ ಮಾಡಬೇಕಾಗಿರಲಿಲ್ಲ ಎಂದರು.
ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಮಾಡಲು ಅಡ್ಡಿಯಾಗಿದ್ದು ಕೇಂದ್ರ ಸರ್ಕಾರ. ಬಿಜೆಪಿ ಅಧಿಕಾರಕ್ಕೆ ಬರಲು ಬಹುಸಂಖ್ಯಾತ ವೀರಶೈವ ಲಿಂಗಾಯಿತರ ಬೆಂಬಲ ಕಾರಣವಾಯ್ತು. ಈಗ ವೀರಶೈವ ಲಿಂಗಾಯಿತರಿಗೆ ಅನ್ಯಾಯವಾದರೆ ಅದರ ಪರಿಣಾಮ ಏನಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಜತೆಗೆ ಈ ಹೋರಾಟದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಪ್ರಮುಖ ಮಠಗಳ ಸ್ವಾಮಿಗಳು ಬಾಯಿ ಮುಚ್ಚಿಕೊಂಡು ಕೂರಬಾರದು. ನಿಮ್ಮ ನಿಲುವು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.
ಯಡಿಯೂರಪ್ಪ ವೀರಶೈವ-ಲಿಂಗಾಯಿತರು ಎಂಬ ಕಾರಣಕ್ಕೆ ನಮ್ಮನ್ನು ಒಬಿಸಿಗೆ ಸೇರ್ಪಡೆ ಮಾಡುವ ಶಿಫಾರಸು ಮಾಡಿ ಎಂದು ನಾವು ಕೇಳಲ್ಲ. ಆದರೆ, ವೀರಶೈವ ಲಿಂಗಾಯಿತರ ಪರಿಸ್ಥಿತಿಯ ಅವಲೋಕನ ಮಾಡಿ ಬಳಿಕ ಶಿಫಾರಸು ಮಾಡಿ.ರಾಜ್ಯ ಸರ್ಕಾರದ ಶಿಫಾರಸನು ಕೇಂದ್ರ ಸರ್ಕಾರ ನಿರ್ಲಕ್ಷಿಸದೇ ಪರಿಗಣಿಸಿ ಜಾರಿಗೊಳಿಸಬೇಕು ಎಂದರು.
ಸಿಂದಗಿಯ ಸಾರಂಗಮಠದ ಷ.ಬ್ರ. ಡಾ .ಪ್ರಭುಸಾರಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತರನ್ನು ಒಡೆಯಲು ದೊಡ್ಡ ಹುನ್ನಾರ ನಡೆದಿದೆ. ಜನಾಂಗದವರು ಸರ್ಕಾರಿ ಸವಲತ್ತು ಪಡೆಯಲು ಲಿಂಗಾಯತ ಎಂಬುದನ್ನೇ ಮರೆತು ಹಿಂದೂ ಗಾಣಿಗ, ಹಿಂದೂ ಬಣಜಿಗ ಎಂದಷ್ಟೇ ಜಾತಿ ಕಾಲಂ ನಲ್ಲಿ ಬರೆಸುತ್ತಿದ್ದಾರೆ. ನಮ್ಮನ್ನು ಒಬಿಸಿ ಗೆ ಸೇರ್ಪಡೆ ಮಾಡಬೇಕು ಎಂಬುದು ಬಹಳ ವರ್ಷದ ಬೇಡಿಕೆಯಾಗಿದೆ ಎಂದರು.