ಬೆಂಗಳೂರು: ಎಸ್ಡಿಪಿಐ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಟ್ವೀಟ್ ಮೂಲಕ ತಮ್ಮ ಕಿಡಿಕಾರಿರುವ ಅವರು, ಎಸ್ಡಿಪಿಐ ಕಾಂಗ್ರೆಸ್ ಕೂಸು ಎಂದಿರುವ ಪ್ರಹ್ಲಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ?. ಮುಸ್ಲಿಮರನ್ನು ಪ್ರಚೋದಿಸಿ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿರುವ ಎಸ್ಡಿಪಿಐ ಕಾಂಗ್ರೆಸ್ ಕೂಸಾಗಲು ಸಾಧ್ಯವೆ? ಎಸ್ಡಿಪಿಐ ಮತ್ತು ಓವೈಸಿಯ ಎಐಎಂಐಎಂ ಪಕ್ಷ ಬಿಜೆಪಿಯ ಬಿ ಟೀಂ ಅನ್ನೋದು ದೇಶಕ್ಕೆ ಗೊತ್ತಿದೆ. ಈ ಬಗ್ಗೆ ಜೋಶಿಯವರು ಎದೆ ತಟ್ಟಿ ಹೇಳುತ್ತಾರೆಯೇ? ಎಂದು ಕೇಳಿದ್ದಾರೆ.
ಸಚಿವ ಪ್ರಹ್ಲಾದ್ ಜೋಶಿಯವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಸ್ಡಿಪಿಐ, ಓವೈಸಿಯ ಎಐಎಂಐಎಂ ಹಾಗೂ ನಾಗಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ. ಆರ್ಎಸ್ಎಸ್ ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ ಎಸ್ಡಿಪಿಐ ಪಾತ್ರವೇನು? ಓವೈಸಿಯ ರೋಲ್ ಏನು ಎಂಬುದು ದೇಶಕ್ಕೆ ತಿಳಿಯಲಿ. ಈ ಸಂಘಟನೆಗಳಿಗೆ ನಾಗಪುರದ ಕನೆಕ್ಷನ್ ಇಲ್ಲದಿದ್ದರೆ ಈ ಕೂಡಲೇ ಎಸ್ಡಿಪಿಐ ಅನ್ನು ನಿಷೇಧಿಸಲಿ ಎಂದು ಆಗ್ರಹಿಸಿದ್ದಾರೆ.