ಬೆಂಗಳೂರು:ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ (ಪಿಎಂಎಫ್ಬಿವೈ) ಫಲಾನುಭವಿ ರೈತರಿಗೆ ಬರಬೇಕಾದ ಮೊತ್ತವನ್ನು ವಿಮಾ ಕಂಪನಿಗಳು ಉಳಿಸಿಕೊಂಡಿರುವುದು ವಿಪರ್ಯಾಸ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿಮಾ ಕಂಪನಿಗಳು ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಜ್ಯದ 3.73 ಲಕ್ಷ ಫಲಾನುಭವಿಗಳಿಗೆ ವಿಮಾ ಕಂಪನಿಗಳು 427 ಕೋಟಿ ಬಾಕಿ ಉಳಿಸಿಕೊಂಡಿರುವುದು ದುರದೃಷ್ಟಕರ ಎಂದು ಟ್ವೀಟ್ ಮಾಡಿದ್ದಾರೆ.
ರೈತರಿಗೆ ಕೃಷಿಯೇ ಬದುಕಿನ ಆಧಾರ:
ಬದುಕಿನ ಹಳಿ ತಪ್ಪದಿರಲು ಬೆಳೆಗಳಿಗೆ ರೈತರು ವಿಮೆ ಮಾಡಿಸುತ್ತಾರೆ. ಹೀಗಾಗಿ ವಿಮಾ ಕಂಪನಿಗಳು ಇಲ್ಲದ ನೆಪ ಹೇಳಿ ವಿಮೆ ನೀಡದಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಕಳೆದ 3 ವರ್ಷಗಳಿಂದಲೂ ಅತಿವೃಷ್ಟಿಯಿಂದ ರೈತರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಈ ಸಂದರ್ಭದಲ್ಲಿ ವಿಮಾ ಕಂಪನಿಗಳು ರೈತರ ವಿಮೆ ಪಾವತಿಸಿ ಕರ್ತವ್ಯ ಮೆರೆಯಬೇಕು. ರೈತರಿಂದ ಪ್ರೀಮಿಯಂ ಪಾವತಿಸಿಕೊಂಡು ವಿಮೆ ನೀಡದಿದ್ದರೆ ಹೇಗೆ? ಕೃಷಿ ಸಚಿವರು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಪ್ರಧಾನಿ ಅತಿಥಿ ನಟನ ಪಾತ್ರ:
ಕೊರೊನಾ ಸರಣಿಯ ಮುಂದುವರೆದ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅತಿಥಿ ನಟನ ಪಾತ್ರವನ್ನು ನಿರ್ವಹಿಸಿ ಹೋಗಿದ್ದಾರೆ. ಕೊರೊನಾ ಸೋಂಕು ವ್ಯಾಪಕವಾದ ಹಿಂದೆ ತಮ್ಮದೇ ಸರ್ಕಾರದ ವೈಫಲ್ಯವಿದ್ದರೂ ಅಪ್ಪಿತಪ್ಪಿಯೂ ಅದರ ಬಗ್ಗೆ ಬಾಯಿ ಬಿಟ್ಟಿಲ್ಲ. ಬದಲಿಗೆ ಜನರಿಗೆ ಕರ್ತವ್ಯ ಪಾಲನೆಯ ಬೋಧನೆ ಮಾಡಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.