ಬೆಂಗಳೂರು: ಕೋವಿಡ್ ತಪಾಸಣೆಯನ್ನು ಮೊದಲೇ ಹೆಚ್ಚಿಸಿದ್ರೆ ರೋಗ ನಿಯಂತ್ರಣ ಸಾಧ್ಯವಿತ್ತು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
'ಕೋವಿಡ್ ತಪಾಸಣೆ ಮೊದಲೇ ಹೆಚ್ಚಿಸಿದ್ದರೆ ರೋಗ ನಿಯಂತ್ರಣ ಸಾಧ್ಯವಿತ್ತು' - Corona control measures
ನಿರಂತರವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ದಿನೇಶ್ ಗುಂಡೂರಾವ್ ಇಂದೂ ಕೂಡ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಪ್ರಾರಂಭದಲ್ಲೇ ಕೋವಿಡ್ ಟೆಸ್ಟ್ ಹೆಚ್ಚಿಸಿ, ಸೋಂಕಿತರನ್ನು ಪತ್ತೆ ಮಾಡಿ ಸೋಂಕನ್ನು ನಿಯಂತ್ರಣಕ್ಕೆ ತರಬಹುದಿತ್ತು. ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಸೋಂಕು ವ್ಯಾಪಕವಾದ ಮೇಲೆ ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸಿದೆ. ಬೇರೆ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣ ಇಳಿಕೆಯಾದರೆ ರಾಜ್ಯದಲ್ಲಿ ಮಾತ್ರ ಏರಿಕೆಯಾಗುತ್ತಿದೆ ಎಂದಿದ್ದಾರೆ.
ಇಂದು ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು ನಿನ್ನೆ ಟ್ವೀಟ್ ಮಾಡಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ಕೇಂದ್ರದಲ್ಲಿ 'ಪ್ಯಾಚಿಡರ್ಮಾ' ವರ್ಗಕ್ಕೆ ಸೇರಿದ ಕೋಣದ ಸರ್ಕಾರವಿದೆ. ಈ ಕೋಣಕ್ಕೆ ಸ್ಪರ್ಶ ಸಂವೇದನೆಯೂ ಬೇಗ ಗೊತ್ತಾಗುವುದಿಲ್ಲ. ಅತ್ತ ಬೆತ್ತದ ಏಟು ಕೂಡಾ ನಾಟುವುದಿಲ್ಲ. ಜಿಡಿಪಿ ಕುಸಿದರೂ, ಆರ್ಥಿಕತೆ ಹಳ್ಳ ಹಿಡಿದು ಹೋದರೂ ಈ ಕೋಣಕ್ಕೆ ಯಾವುದೂ ಸಾಟಿಯಿಲ್ಲ ಎಂದಿದ್ದರು.