ಬೆಂಗಳೂರು: ಬ್ರಾಹ್ಮಣ ಸಮುದಾಯದ ಬಗ್ಗೆ ಮಾತನಾಡಿದರೆ ಅವರ ಶಾಪ ತಟ್ಟದೆ ಬಿಡುವುದಿಲ್ಲ. ಇದಕ್ಕಿಂತ ಜಾಸ್ತಿ ನಾನು ಏನೂ ಮಾತನಾಡಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬ್ರಾಹ್ಮಣರಿಗೆ ಅವಹೇಳನ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬ್ರಾಹ್ಮಣ ಸಮುದಾಯದ ಕುರಿತು ಟೀಕಿಸಿರುವ ವಿಚಾರ ನನಗೆ ಗೊತ್ತಿಲ್ಲ. ಯಾಕೆ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಅದನ್ನು ಕುಮಾರಸ್ವಾಮಿ ಅವರೇ ಹೇಳಬೇಕು. ಆ ರೀತಿ ಜಾತಿ ಹೆಸರನ್ನ ಇಟ್ಟುಕೊಂಡು ಮಾತನಾಡುವುದು ಮಾಜಿ ಮುಖ್ಯಮಂತ್ರಿ ಅವರಿಗೆ ಶೋಭೆ ತರಲ್ಲ. ಒಂದು ಸಮುದಾಯವನ್ನು ಎಳೆ ತಂದು ಹಾಗೆ ಮಾತನಾಡುವುದು ಸರಿಯಲ್ಲ. ಎಲ್ಲಾ ಜಾತಿ ಸಮುದಾಯದಲ್ಲೂ ಅನೇಕ ಉಪ ಸಮುದಾಯಗಳು ಇದ್ದೇ ಇರ್ತಾವೆ ಎಂದು ಅಭಿಪ್ರಾಯಪಟ್ಟರು.
ಇಂದು ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡ ಸಂದರ್ಭ ಮಾತನಾಡಿದ್ದ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿಯನ್ನ ಚುನಾವಣೆ ನಂತರ ಸಿಎಂ ಮಾಡಬೇಕು ಅಂತ ಸಂಘ ಪರಿವಾರ ನಿರ್ಧರಿಸಿದೆ. ಜೋಷಿ ಅವರು ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ. ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿಯ ಮಠ ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರು ಇವರು. ಇವರು ನಮ್ಮ ಭಾಗದ ಹಳೆಯ ಬ್ರಾಹ್ಮಣರಂತೆ ಅಲ್ಲ. ಇವರು ಶೃಂಗೇರಿ ಮಠಕ್ಕೆ ಸೇರಿದವರಲ್ಲ. ಮರಾಠಿ ಪೇಶ್ವೆ ಸಮುದಾಯಕ್ಕೆ ಸೇರಿದವರು. ಇವರು ಶೃಂಗೇರಿ ಮಠವನ್ನು ಒಡೆದವರು. ನಮ್ಮ ಭಾಗದ ಹಳೇ ಬ್ರಾಹ್ಮಣರು ಸರ್ವೇಜನ: ಸುಖಿನೋ ಭವಂತು ಅನ್ನೋರು. ಸರ್ವ ಜನರ ಕ್ಷೇಮ ಬಯಸುವವರು. ಆದ್ರೆ ಇವರು ದೇಶ ಒಡೆಯುವ, ದೇಶಕ್ಕೆ ಕೊಡುಗೆ ನೀಡಿದವರನ್ನ ಹತ್ಯೆ ಮಾಡಿದವರು. ಬಿಜೆಪಿಯ ಹುನ್ನಾರ ಆರ್ಎಸ್ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನ ಹಾಳು ಮಾಡ್ತಾರೆ ಎಂದು ಹೇಳಿದರು.
ಪಾರದರ್ಶಕ ಟಿಕೆಟ್ ಹಂಚಿಕೆ ಮಾಡಬೇಕಿದೆ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ ಮಾತನಾಡಿದ ದಿನೇಶ್ ಗುಂಡೂರಾವ್, ಈಗಾಗಲೇ ಚುನಾವಣಾ ಸಮಿತಿ ಸಭೆ ಆಗಿದೆ. ಪಾರದರ್ಶಕ ಟಿಕೆಟ್ ಹಂಚಿಕೆ ಮಾಡಬೇಕಿದೆ. ಗೆಲ್ಲುವ ಅಭ್ಯರ್ಥಿಗಳಿಗೆ ಮತ್ತು ಮಹಿಳೆಯರಿಗೆ ಟಿಕೇಟ್ ನೀಡಬೇಕು. ಸರ್ವೇ ಅಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಪಡೆದು ಹಂಚಿಕೆ ಮಾಡ್ತೇವೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಅಸಮಾಧಾನ ಆಗದ ರೀತಿಯಲ್ಲಿ ಟಿಕೆಟ್ ಹಂಚಿಕೆ ಮಾಡ್ತೇವೆ ಎಂದು ಹೇಳಿದರು.