ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಸಾವಿಗೆ ಸ್ಪಂದಿಸಿದ ಮಾದರಿಯಲ್ಲಿಯೇ ತಾವು ಫಾಝಿಲ್ ಹಾಗೂ ಮಸೂದ್ ಸಾವಿಗೂ ಸ್ಪಂದಿಸಬೇಕಿತ್ತು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೊಂದು ಬಹಿರಂಗ ಪತ್ರ. ನೀವು ಈ ರಾಜ್ಯದ ಮುಖ್ಯಮಂತ್ರಿ. ಸದ್ಯ ನೀವು ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ. ಪ್ರವೀಣ್ ಸಾವಿಗೆ ನೀವು ಸ್ಪಂದಿಸಿದ್ದು ಅನುಕರಣೀಯ. ಆದರೆ ಹತನಾದ ಫಾಝಿಲ್‌ಗೆ ಹಾಗೂ ಮಸೂದ್‌ಗೆ ನಿಮ್ಮಿಂದ ಕೊಂಚವಾದರೂ ಸಾಂತ್ವನ ಬೇಡವೇ? ಎಂದು ಪ್ರಶ್ನಿಸಿದ್ದಾರೆ.
ಬೊಮ್ಮಾಯಿಯವರೇ ನೀವು ಈ ರಾಜ್ಯದ ಯಜಮಾನನಿದ್ದಂತೆ. ಯಜಮಾನ ಎಲ್ಲರಿಗೂ ಸಲ್ಲುವನಂತಿರಬೇಕು. ಆದರೆ ನೀವು ಮಾಡಿದ್ದೇನು? ಪ್ರವೀಣ್ ಮನೆಗೆ ಹೋದಿರಿ, ಸರ್ಕಾರದಿಂದ 25 ಲಕ್ಷ ಪರಿಹಾರ ಕೊಟ್ಟಿದ್ದೀರ, ಇಲ್ಲಿ ತಕರಾರಿಲ್ಲ. ಆದರೆ ಹತ್ಯೆಯಾದ ಮಸೂದ್, ಫಾಝಿಲ್ ಮಾಡಿದ ತಪ್ಪೇನು? ಸತ್ತವರು ಮುಸ್ಲಿಂರಾದರೆ ಅವರು ಪರಿಹಾರಕ್ಕೆ ಅರ್ಹರಲ್ಲವೆ? ಎಂದು ಕೇಳಿದ್ದಾರೆ.
ಬೊಮ್ಮಾಯಿಯವರೇ ಸಾವಿನ ಮನೆಯ ಸಂಕಟ ಅನುಭವಿಸಿದವರಿಗೆ ಗೊತ್ತು. ದುಡಿಯುವ ಮಗ, ವಯಸ್ಸಿಗೆ ಬಂದ ಮಗ ಕಣ್ಣೆದುರೇ ಶವವಾಗುವಾಗ ಅದನ್ನು ಭರಿಸುವ ಶಕ್ತಿ ಯಾವ ತಂದೆ-ತಾಯಿಗೂ ಇರುವುದಿಲ್ಲ. 'ಪುತ್ರಶೋಕಂ ನಿರಂತರಂ' ಇದು ಸಾರ್ವಕಾಲಿಕ ಸತ್ಯ. ಅದು ಹಿಂದೂ ಇರಲಿ, ಮುಸ್ಲಿಂರರಿಲಿ. ದಯವಿಟ್ಟು ಇದನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.
ಬೊಮ್ಮಾಯಿಯವರೇ ನಿಮ್ಮ ಭಾಗದಲ್ಲಿ ಪಿಂಜಾರ ಮುಸ್ಲಿಂರಿದ್ದಾರೆ. ನಿಮ್ಮಲ್ಲಿ ಗಣೇಶೋತ್ಸವವಾಗಲಿ, ಉರುಸ್ ಆಗಲಿ ಅಲ್ಲಿ ಹಿಂದೂ-ಮುಸಲ್ಮಾನರ ಪರಸ್ಪರ ಭಾಗವಹಿಸುವಿಕೆ ಇದೆ. ಈ ಹಿಂದೆ ಕರಾವಳಿಯೂ ಭಾವೈಕ್ಯತೆಯ ನಾಡಾಗಿತ್ತು. ಕರಾವಳಿಯಲ್ಲಿ ಮಾಪಿಳ್ಳ ಮುಸಲ್ಮಾನರು, ಹಿಂದೂಗಳು ಒಟ್ಟಾಗಿಯೇ ಇದ್ದರು. ಈ ಸಂಬಂಧಕ್ಕೆ ಹುಳಿ ಹಿಂಡಿದ್ಯಾರು? ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಹಾಕಿದ್ದಾರೆ.
ಇದನ್ನೂ ಓದಿ:ಸರ್ಕಾರ ಒಂದಲ್ಲ ಒಂದು ವಿಷಯ ತಂದು ಸಂಸತ್ನಲ್ಲಿ ಗದ್ದಲ ಮಾಡ್ತಿದೆ: ಮಲ್ಲಿಕಾರ್ಜುನ ಖರ್ಗೆ
ಬೊಮ್ಮಾಯಿಯವರೇ, ಸೌಹಾರ್ದತೆಯಿಂದಿದ್ದ ಕರಾವಳಿ ಇಂದು ಕೋಮುದಳ್ಳುರಿಯ ನೆಲವಾಗಿದ್ದಕ್ಕೆ ಕಾರಣ ಯಾರು? ಸಂಘ ಪರಿವಾರ ಹಾಗು ಪಿಎಫ್ಐ ಅಂತಹ ಕೋಮು ಸಂಘಟನೆಗಳು ಇದಕ್ಕೆ ಕಾರಣವಲ್ಲವೇ? ನೀವು ಬಿತ್ತಿದ್ದೇ ಈಗ ಫಲವಾಗಿ ಸಿಗುತ್ತಿರುವುದಲ್ಲವೇ? ನೀವು ಜನತಾ ಪರಿವಾರದ ಹಿನ್ನೆಲೆಯವರು, ನಿಮಗೆ ಈ ಸೂಕ್ಷ್ಮ ಅರ್ಥವಾಗಿರಬೇಕೆಂದು ಭಾವಿಸಿದ್ದೇನೆ ಎಂದಿದ್ದಾರೆ.